ಬೆಂಗಳೂರು: ಮೈಸೂರಿನಲ್ಲಿ ಭೂಮಿಯೇ ಬೆಂಕಿಯನ್ನು ಉಗುಳಿ ಬಾಲಕನನ್ನು ಬಲಿ ಪಡೆದು ಮತ್ತೊಬ್ಬನನ್ನು ಗಾಯಗಗೊಳಿಸಿದ ಘಟನೆ ಇನ್ನೂ ಹಸಿರಾಗಿರುವಾಗಲೇ ಮಂಡ್ಯ, ರಾಮನಗರ, ಬೆಂಗಳೂರು ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿರುವುದು ಈ ವ್ಯಾಪ್ತಿಯ ಜನರನ್ನು ಆತಂಕಕ್ಕೆ ತಳ್ಳಿದೆ.
ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಎರಡರಿಂದ ಮೂರು ಸೆಕೆಂಡ್ ಗಳ ಕಂಪನದ ಅನುಭವವಾಗಿದೆ ಎಂದು ಕೆಲವರು ಹೇಳುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಹಿರಿಯ ನಟಿ ಲೀಲಾವತಿ ಅವರ ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆಯಂತೆ. ಮಂಡ್ಯ, ತುಮಕೂರು, ರಾಮನಗರ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಂಪನದ ಅನುಭವದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕೆಲವರು ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಸಿಲಿಕಾನ್ ಸಿಟಿ ಬಸವನಗುಡಿ, ಕೆಂಗೇರಿ, ಗಿರಿನಗರ, ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ ಮೊದಲಾದ ಕಡೆಗಳಲ್ಲಿ ಬೆಳಗ್ಗೆ 7:30 ರ ಸಮಯದಲ್ಲಿ ಭೂಮಿ ಅಲುಗಾಡಿದ ಅನುಭವವಾಯಿತು ಎಂದು ಕೆಲವು ನಿವಾಸಿಗಳು ಹೇಳಿದ್ದಾರೆ.
ಮಂಡ್ಯ, ರಾಮನಗರ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಕಂಪನದ ಅನುಭವವಾದ ಬಗ್ಗೆ ನಿವಾಸಿಗಳು ಹೇಳಿದ್ದಾರೆ. ಕೆಲವರು ಏನಾಗುತ್ತಿದೆ ಎಂಬ ಭಯದಲ್ಲಿ ಹೊರಗೆ ಓಡಿ ಬಂದಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಭೂಕಂಪನದ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ಬೆಂಗಳೂರು ಮತ್ತು ಮಂಡ್ಯದಲ್ಲಿ ಭಾನುವಾರವಷ್ಟೆ ಮಳೆ ಬಂದು ಮರಗಳು, ವಿದ್ಯುತ್ ಕಂಬಗಳು ಬಿದ್ದು ಅನಾಹುತ ಸೃಷ್ಟಿಯಾಗಿತ್ತು. ಇದೀಗ ಭೂಮಿ ಕಂಪಿಸಿದ ಅನುಭವವಾಗಿರುವುದು ಭಯದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ. ಈಗಾಗಲೇ ಸಿಗುತ್ತಿರುವ ಮಾಹಿತಿ ಪ್ರಕಾರ ನ್ಯೂಟೌನ್, ಯಲಹಂಕ, ಶ್ರೀನಗರ, ಹನುಮಂತನಗರ, ನೆಲಮಂಗಲಗಳಲ್ಲೂ ಭೂಮಿ ಕಂಪಿಸಿದೆ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದದೆ ಇದನ್ನು ಹವಾಮಾನ ಇಲಾಖೆ ಮಾತ್ರ ಒಪ್ಪುತ್ತಿಲ್ಲ ಕಾರಣ ರಾಜ್ಯದಲ್ಲಿ ಭೂಕಂಪದ ಬಗ್ಗೆ ರಿಕ್ಟರ್ ಮಾಪಕದಲ್ಲಿ ಯಾವುದೇ ರೀತಿಯ ಮಾಹಿತಿ ದಾಖಲಾಗಿಲ್ಲವಂತೆ.
ಇತ್ತೀಚೆಗಿನ ವಾತಾವರಣದಲ್ಲಾಗುತ್ತಿರುವ ಏರುಪೇರು, ಮೇಲಿಂದ ಮೇಲೆ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿದರೆ ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿರುವ ಮನುಷ್ಯ ಇನ್ನು ಏನೆಲ್ಲ ತೊಂದರೆಗಳನ್ನು ಅನುಭವಿಸಬೇಕೋ ಎಂಬ ಭಯವೂ ಕಾಡುತ್ತಿರುವುದಂತು ಸತ್ಯ.