ಬೆಂಗಳೂರು: ದೀನ ದಲಿತರು, ಬಡವರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ವೇಳೆಯಲ್ಲಿ ಅನ್ನ, ವಸತಿ, ಅಕ್ಷರ ದಾಸೋಹವನ್ನು ನೀಡುವ ಮೂಲಕ ಶಾಂತಿಧೂತರಾಗಿರುವ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡುವಂತೆ ಪ್ರಧಾನ ಮಂತ್ರಿಗಳನ್ನು ಕೋರುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಸಿದ್ಧಗಂಗಾ ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ 2016ನೇ ಸಾಲಿನ ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಶ್ರೀಗಳಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. ಸ್ವಾಮೀಜಿಯವರಿಗೆ ಎಲ್ಲಾ ಪ್ರಶಸ್ತಿಗಳು ಬಂದಿವೆ. ಭಾರತರತ್ನ ಪ್ರಶಸ್ತಿ ಬರಬೇಕು. ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದ್ದು, ಪ್ರಧಾನಿಗಳಿಗೆ ಮತ್ತೊಮ್ಮೆ ಭಾರತರತ್ನ ಪ್ರಶಸ್ತಿಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯಂತಹ ಅರ್ಹರು ಬೇರೊಬ್ಬರಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಶಾಂತಿಧೂತರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಗಳನ್ನು ಪರಿಗಣಿಸುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.
ದೀನ ದಲಿತರಿಗೆ, ಬಡವರಿಗೆ ಅನ್ನ, ವಸತಿ, ಅಕ್ಷರ ದಾಸೋಹ ನೀಡಿ ಮೌಲ್ಯಯುತವಾದ ಹಾಗೂ ಬಲಿಷ್ಠ ಸಮಾಜವನ್ನು ನಿರ್ಮಾಣ ಮಾಡಲು ಸ್ವಾಮೀಜಿಯವರು ಮಹತ್ತರವಾದ ಕೊಡುಗೆ ನೀಡಿದ್ದಾರೆ. ಇವರ ಅನನ್ಯ ಸೇವೆಯನ್ನು ಪರಿಗಣಿಸಿಯೇ ಶ್ರೀ ಭಗವಾನ್ ಮಹಾವೀರ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಶಾಂತಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಬಡವರು, ದೀನದಲಿತರ ಕಣ್ಣೀರೊರೆಸುತ್ತಿರುವ ಹಾಗೂ ಜೈನಧರ್ಮದ ಮೂರು ತತ್ವಗಳಂತೆ ಕಾರ್ಯ ನಿರ್ವಹಿಸುತ್ತಿರುವ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ತುಂಬಾ ಸಂತಸ ತಂದಿದೆ ಎಂದರು.
ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಆಶೀರ್ವಚನ ನೀಡಿದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಈ ಪ್ರಶಸ್ತಿಯನ್ನು ನೀಡಿರುವುದು ಶ್ರೀಮಠದ ಕೆಲಸ ಕಾರ್ಯಗಳಿಗೆ ಸರ್ಕಾರ ನೀಡಿರುವ ಗೌರವ ಸೂಚಕವಾಗಿದೆ. ಮಹಾವೀರರ ಭೋಧನಾ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಸಿದ್ಧಲಿಂಗಸ್ವಾಮೀಜಿ ವಹಿಸಿದ್ದರು.
ಸಚಿವ ಟಿ.ಬಿ.ಜಯಚಂದ್ರ, ಶಾಸಕರಾದ ವಿ.ಎಸ್.ಉಗ್ರಪ್ಪ, ಎಂ.ಡಿ.ಲಕ್ಷ್ಮಿನಾರಾಯಣ, ಡಾ.ಎಸ್.ರಫೀಕ್, ಬಿ.ಸುರೇಶ್ ಗೌಡ, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಸಾಹಿತಿ ಕೆ.ಬಿ. ಸಿದ್ಧಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್, ಜಿಪಂ ಸಿಇಒ ಕೆ.ಜಿ.ಶಾಂತಾರಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ್ ಮತ್ತಿತರರು ಹಾಜರಿದ್ದರು.