ಬೆಂಗಳೂರು: ಗ್ರಂಥಾಲಯಗಳಲ್ಲಿ ಇರುವ ಹಳೆಯ ಪುಸ್ತಕಗಳನ್ನು ಪುನರ್ ಮುದ್ರಣ ಮಾಡುವುದರ ಬದಲು ಅಂತರ್ಜಾಲದಲ್ಲಿ ದಾಖಲಿಸುವ ಪ್ರಕ್ರಿಯೇ ಪ್ರಾರಂಭವಾಗಿದ್ದು ಈಗಾಗಲೇ 50 ಸಾವಿರ ಪುಸ್ತಕಗಳನ್ನು ಅಂತರ್ಜಾಲದಲ್ಲಿ ದಾಖಲಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ನಗರದ ಕಬ್ಬನ್ ಪಾರ್ಕ್ ನಲ್ಲಿರುವ ಕೇಂದ್ರ ಗ್ರಂಥಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಹಾಗೂ ರಾಜ್ಯ ಕೇಂದ್ರ ಗ್ರಂಥಾಲಯದ ನವೀಕೃತ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಗ್ರಂಥಾಲಯದಲ್ಲಿ 3.64 ಲಕ್ಷ ಪುಸ್ತಕಗಳಿದ್ದು ಜಿಲ್ಲಾ ಕೇಂದ್ರಗಳಲ್ಲಿ ಒಂದು ಲಕ್ಷ ಪುಸ್ತಕಗಳು ಲಭ್ಯ ಇರುವುದಾಗಿ ಹೇಳಿದರು.
ನಗರದಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಗಳನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಗ್ರಂಥಾಲಯದ ಪ್ರಾಧಿಕಾರದ ನೆರವಿನೊಂದಿಗೆ ಸುಮಾರು 1.36 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನವೀಕರಣಗೊಳಿಸಲಾಗಿದೆ. ಕೋಲ್ಕತಾ ಮತ್ತು ಚೆನ್ನೈ ನಗರಗಳಿರುವ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿಯೂ ಸುಸಜ್ಜಿತ ಕೇಂದ್ರ ಗ್ರಂಥಾಲಯವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲುದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸುಸಜ್ಜಿತ ಗ್ರಂಥಾಲಯಗಳಲ್ಲಿ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಅವರ ಆಸಕ್ತಿಗೆ ಅನುಗುಣವಾದ ಪುಸ್ತಕಗಳನ್ನು ಓದಲು ವ್ಯವಸ್ಥೆ ಮಾಡುವುದರ ಜೊತೆಗೆ ಪ್ರತ್ಯೇಕ ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕೇವಲ ಪುಸ್ತಕ ಓದುವುದಕ್ಕೆ ಮಾತ್ರ ಸಿಮಿತವಾಗದೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತ ಪುಸ್ತಕಗಳನ್ನು ಒದಗಿಸುವಂತ ಕೇಂದ್ರಗಳನ್ನಾಗಿ ಗ್ರಂಥಾಲಯಗಳನ್ನು ಪರಿವರ್ತಿಸಲು ಚಿಂತಿಸಲಾಗಿದೆ ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗುವುದು. ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೊದಲ ಹಂತದಲ್ಲಿ 1204 ಪದವಿಪೂರ್ವ ಕಾಲೇಜುಗಳ ಪೈಕಿ 396 ಕಾಲೇಜುಗಳಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಇದೇ ಸಂದರ್ಭ ಹೇಳಿದರು.