ಬೆಂಗಳೂರು: ರಾಜ್ಯದ ಆರು ಜಿಲ್ಲೆಗಳಲ್ಲಿ ಗರ್ಭೀಣಿ ಸ್ತ್ರೀಯರು ಹಾಗೂ ಎರಡು ವರ್ಷದೊಳಗಿನ ಮತ್ತು ಐದ ರಿಂದ ಆರು ವರ್ಷದ ಅಪೂರ್ಣ ಲಸಿಕೆ ಪಡೆದಿರುವ ಹಾಗೂ ಯಾವುದೇ ಲಸಿಕೆಗಳನ್ನು ಪಡೆಯದಿರುವ ಮಕ್ಕಳಿಗೆ ಲಸಿಕೆ ನೀಡಲು 2017 ರ ಮೇ ತಿಂಗಳಿಂದ ಇಂಧ್ರಧನುಷ್ ಅಭಿಯಾನವನ್ನು ಸರ್ಕಾರ ಪ್ರಾರಂಭಿಸಲಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಅಭಿಯಾನವನ್ನು ಮೇ, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ನಾಲ್ಕನೆ ಹಂತದ ಇಂಧ್ರಧನುಷ್ ಅಭಿಯಾನಕ್ಕೆ ಬಿ.ಬಿ.ಎಂ.ಪಿ.ಯೂ ಸೇರಿದಂತೆ ಬೆಂಗಳೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳನ್ನು ಗುರುತಿಸಲಾಗಿದೆ. 2017ರ ಮೇ 8 ರಿಂದ 7 ಕಾರ್ಯದಿನಗಳ ಕಾಲ (ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ), ಜೂನ್, ಜುಲೈ, ಆಗಸ್ಟ್ ತಿಂಗಳ 7 ನೇ ತಾರೀಕಿನಿಂದ ಏಳು ಕಾರ್ಯ ದಿನಗಳ ಕಾಲ ಲಸಿಕೆಯಿಂದ ವಂಚಿತರಾದ ಮಕ್ಕಳು ಮತ್ತು ಗರ್ಭೀಣಿ ಸ್ತ್ರೀಯರಿಗೆ ಆಯ್ದ ಕೇಂದದ್ರಗಳಲ್ಲಿ ವಿಶೇಷವಾಗಿ ಲಸಿಕೆಗಳನ್ನು ನೀಡಲಾಗುವುದು.
ಇಂಧ್ರಧನುಷ್ ಅಭಿಯಾನದಡಿ ಹಿಂದೆ 7 ಲಸಿಕೆಗಳನ್ನು ನೀಡಲಾಗುತ್ತಿತ್ತು. ಪ್ರಸ್ತುತ ಈ ಕಾರ್ಯಕ್ರಮದಡಿ 10 ಲಸಿಕೆಗಳನ್ನು ನೀಡಲಾಗುತ್ತಿದೆ. ಗರ್ಭಿಣಿ ಸ್ತ್ರೀಯರು, ಎರಡು ವರ್ಷದೊಳಗಿನ ಮಕ್ಕಳು ಹಾಗೂ ಐದರಿಂದ ಆರು ವರ್ಷದ ಮಕ್ಕಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತಾರೆ. ಇಂದ್ರಧನುಷ್ ಅಭಿಯಾನದಡಿ ಕೊಳಚೆ ಮತ್ತು ವಲಸೆ ಪ್ರದೇಶ, ಅಲೇಮಾರಿ ಪ್ರದೇಶ ಇಟ್ಟಿಗೆ ಕಾರ್ಖಾನೆ, ಕಟ್ಟಡ ನಿರ್ಮಾಣ ಪ್ರದೇಶಗಳು ಮತ್ತಿತರ ಎಡೆಗಳಲ್ಲಿ ಲಸಿಕೆ ವಂಚಿತರನ್ನು ಗುರುತಿಸಿ ಲಸಿಕೆ ನೀಡಲಾಗುತ್ತದೆ. ಪೊಲೀಯೋ, ಹೆಪಟೈಟಿಸ್ ಬಿ, ಬಾಲಕ್ಷಯ, ಡಿಫ್ತಿರಿಯ, ಪೆರ್ಟಾಸಿಸ್, ಧನುರ್ವಾಯು, ಹಿಬ್, ದಡಾರ, ರೂಬೆಲ್ಲಾ ಹಾಗೂ ಜಾಪಾನಿಸ್ ಎನ್ಸಫಲೈಟಿಸ್ ಹತ್ತು ಮಾರಕ ರೋಗಳಿಗೆ ಲಸಿಕೆ ನೀಡಲಾಗುತ್ತಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ,ಮನೆ ಭೇಟಿ ನೀಡಿ ಲಸಿಕೆ ಬಿಟ್ಟು ಹೋಗಿರುವ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ಪಡೆಯುವಂತೆ ಪ್ರೇರೆಪಿಸುತ್ತಾರೆ. ಇದಕ್ಕಾಗಿ ಅವರಿಗೆ ಗೌರವಧನ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.