ಬೆಂಗಳೂರು: ನಮ್ಮ ಜನಪರ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಿರುವುದರಿಂದ ನಮಗೆ ರಾಜ್ಯ ಬಿಜೆಪಿ ಒಳ ಜಗಳದ ಲಾಭ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಒಳಜಗಳದ ಬಗ್ಗೆ ಮಾತನಾಡುತ್ತಾ ರಾಜ್ಯ ಬಿಜೆಪಿಯದು ಮಿಷನ್ ನೂರೈವತ್ತು ಎಂದು ಘೋಷಣೆ ಮಾಡುತ್ತಾ ಬೀಗುತ್ತಿದ್ದರು ಅದು ನೂರೈವತ್ತೋ ಅಥವಾ ನಾನೂರಿಪ್ಪತ್ತೋ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಜನರು ನಿರ್ಧರಿಸಲಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನೊಂದು ಅವಧಿಗೆ ಕಾಂಗ್ರೆಸ್ ಪಕ್ಷವೇ ಅಧಿಕಾರ ನಡೆಸುತ್ತದೆ ಎಂದು ಭವಿಷ್ಯ ನುಡಿದ ಅವರು, 2018ರ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ನಡೆಸಲಾಗುತ್ತದೆ ಎಂಬುದನ್ನು ಒತ್ತಿ ಹೇಳಿದರು.
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರ ಹೇಳಿಕೆ ಪ್ರಬುದ್ಧವಾದುದಲ್ಲ. ಯಾವುದೇ ಜವಾಬ್ದಾರಿಯುತ ರಾಜಕಾರಣಿಗಳು ಈ ತರಹ ಲಘುವಾಗಿ ಮಾತನಾಡುವುದಿಲ್ಲ. ರಾಜ್ಯದಲ್ಲಿ ಹತಾಶರಾಗಿರುವ ಬಿಜೆಪಿ ನಾಯಕರು ಸುಮ್ಮನಿರಲಾರದೆ ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ಅವರಲ್ಲೇ ನಡೆಯುತ್ತಿರುವ ಒಳಜಗಳ ಬೀದಿಗೆ ಬಿದ್ದಿದ್ದು, ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಇಂದೋ, ನಿನ್ನೆಯೋ ಕಟ್ಟಿದ ಪಕ್ಷವಲ್ಲ ಇದಕ್ಕೆ ಶತಮಾನಗಳ ಇತಿಹಾಸವಿದೆ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎನ್ನುವುದು ಕನಸಿನ ಮಾತಾಗಿದೆ. ಅದು ಯಾರಿಂದಲೂ ಸಾಧ್ಯವಿಲ್ಲ ಎಂದ ಅವರು ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಮೇ 13ಕ್ಕೆ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಮೇ 14ರಂದು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದ್ದು, ಈ ಸಮಾವೇಶದ ಮೂಲಕ ಸರ್ಕಾರದ ಜನಪರ ಯೋಜನೆ ಮತ್ತು ಸಾಧನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಇದೇ ಸಂದರ್ಭ ಅವರು ವಿವರಿಸಿದರು.