ಬೆಂಗಳೂರು: ಖಾಸಗಿ ಶಾಲಾ ಮಕ್ಕಳು ಬೇಸಿಗೆಯಲ್ಲಿ ಬೇಸಿಗೆ ಶಿಬಿರದಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದರೆ ಸರ್ಕಾರಿ ಶಾಲಾ ಮಕ್ಕಳು ಇದರಿಂದ ವಂಚಿತರಾಗಿದ್ದರು. ಇದನ್ನು ಮನಗಂಡು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ 150ಕ್ಕಿಂತಲೂ ಹೆಚ್ಚು ಮಕ್ಕಳಿರುವ ಸುಮಾರು 7049 ಶಾಲೆಗಳನ್ನು ಗುರುತಿಸಿ ಈ ಶಾಲೆಗಳಲ್ಲಿ ಸ್ವಲ್ಪ ಓದು-ಸ್ವಲ್ಪ ಮೋಜು ಆಧಾರಿತ ಬೇಸಿಗೆ ಸಂಭ್ರಮ-2017 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲರ ಗಮನಸೆಳೆಯುತ್ತಿದೆ.
ಈ ಶಿಬಿರದಲ್ಲಿ 2016-17ನೇ ಸಾಲಿನಲ್ಲಿ 5 ಮತ್ತು 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂದರೆ 2017-18ನೇ ಸಾಲಿನಲ್ಲಿ 6 ಮತ್ತು 7 ನೇ ತರಗತಿಗೆ ದಾಖಲಾಗುವ ಮಕ್ಕಳು ಭಾಗಿಯಾಗಿದ್ದು, ಅವರಿಗೆ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಏ.17ರಿಂದ ಆರಂಭವಾಗಿರುವ ಈ ಬೇಸಿಗೆ ಶಿಬಿರ ಸುಮಾರು ಐದು ವಾರಗಳ ಕಾಲ ನಡೆಯುವುದರಿಂದ ಸರ್ಕಾರಿ ಶಾಲಾ ಮಕ್ಕಳು ಇದರಲ್ಲಿ ಖುಷಿಯಿಂದಲೇ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರಿನ ಪ್ರಥಮ್ ಸಂಸ್ಥೆಯ ಸಹಯೋಗದೊಂದಿಗೆ ಕಲಿಕಾ ಸಾಮಾಗ್ರಿಯನ್ನು ಸಿದ್ಧಪಡಿಸಿ ಮತ್ತು ಸರ್ಕಾರಿ ಮುದ್ರಣಾಲಯದ ಮೂಲಕ ಮುದ್ರಿಸಿ ಸರಬರಾಜು ಮಾಡಲಾಗಿದೆ. ಸದರಿ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಆ್ಯಪ್ ಒಂದನ್ನು ಬೆಂಗಳೂರಿನ ಶಿಕ್ಷಣ ಫೌಂಡೇಶನ್ನ ಸಹಯೋಗದೊಂದಿಗೆ ಸಿದ್ದಪಡಿಸಲಾಗಿದೆ.
ಐದು ವಾರಗಳ ಕಾಲ ನಡೆಯಲಿದ್ದು ಶಿಬಿರಕ್ಕೆ ಹಾಜರಾಗುವ ಮಕ್ಕಳ ಓದುವ ಮತ್ತು ಅಂಕ ಗಣಿತದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಮೂಲಕ ಹೊಂದಲಾಗಿದೆ. ಭಾಷೆಯಲ್ಲಿ ಅರ್ಥ ಗ್ರಹಿಕೆಗೆ ಮತ್ತು ಗಣಿತದಲ್ಲಿ ಅನ್ವಯಕ್ಕೆ ಚಟುವಟಿಕೆಗಳನ್ನು ರೂಪಿಸಲಾಗಿದೆ. ಈ ಚಟುವಟಿಕೆಗಳನ್ನು ಆಯೋಜಿಸಲು ವಾರಕ್ಕೆ ಒಂದರಂತೆ ಚಟುವಟಿಕಾ ಪುಸ್ತಕಗಳನ್ನು ಸಿದ್ದಪಡಿಸಿ ವಿದ್ಯಾಥರ್ಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಿಗೆ ನೀಡಲಾಗಿದೆ. ಮೊದಲನೇ ವಾರ ಕುಟುಂಬ, ಎರಡನೇ ವಾರ ನೀರು, ಮೂರನೇ ವಾರ ಆಹಾರ, ನಾಲ್ಕನೇ ವಾರ ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಐದನೇ ವಾರ ಪರಿಸರ ವಿಷಯಗಳ ಬಗ್ಗೆ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.
ಮೂರು ಗಂಟೆಗಳ ಅವಧಿಯ ಬೇಸಿಗೆ ಶಿಬಿರವು ಪ್ರತಿ ಮಕ್ಕಳು ಭಾಗವಹಿಸುವಂತೆ ವೈಯುಕ್ತಿಕ ಮತ್ತು ಗುಂಪು ಚಟುವಟಿಕೆಗಳನ್ನು ಒಳಗೊಂಡಿದೆ. ವಾರದ ಐದು ದಿನಗಳು ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವನ್ನು ಮಾಡಿಕೊಡಲಾಗಿದೆ. ವಾರದ ಆರನೇ ದಿನ ವಿದ್ಯಾರ್ಥಿಗಳ ಪೋಷಕರು, ಸಮುದಾಯ ಮತ್ತು ಆಸಕ್ತರು ಶಾಲೆಗೆ ಭೇಟಿ ನೀಡಿ ಮಕ್ಕಳು ಇಡೀ ವಾರದಲ್ಲಿ ಯಾವ ಚಟುವಟಿಕೆಗಳಲ್ಲಿ ತೆೊಡಗಿಸಿಕೊಂಡಿದ್ದರು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಒಟ್ಟಾರೆ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಬಡಮಕ್ಕಳಿಗೆ ಬೇಸಿಗೆ ಶಿಬಿರದ ಪರಿಕಲ್ಪನೆ ಮೂಡಿಸಿದೆ.