ಬೆಂಗಳೂರು: ರಾಜ್ಯ ಸರ್ಕಾರದ ಪತ್ರಾಗಾರ ಇಲಾಖೆ ಸುಮಾರು 60 ಲಕ್ಷ ಪುಟಗಳ ಐತಿಹಾಸಿಕ ಮೌಲ್ಯವುಳ್ಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಆ ಪೈಕಿ ಮೊದಲನೇ ಹಂತದಲ್ಲಿ ಐದು ಲಕ್ಷ ಪುಟಗಳ ದಾಖಲೆಗಳು ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ತಿಳಿಸಿದ್ದಾರೆ.ಇ-ಆಡಳಿತ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಾಗಾರ ಇಲಾಖೆಯಲ್ಲಿ ಈ ವ್ಯವಸ್ಥೆ ಪ್ರಪ್ರಥಮ ಭಾರಿಗೆ ಅಳವಡಿಸಲಾಗಿದ್ದು ಇದು ದೇಶದಲ್ಲಿಯೇ ಪ್ರಥಮ ಎನಿಸಿದೆ ಎಂದರು.
ರಾಜ್ಯ ಸರ್ಕಾರ ಎಲ್ಲಾ ಇಲಾಖೆಯ ಎ.ಬಿ.ಸಿ. ವರ್ಗದ ಕಡತಗಳ ನಿರ್ವಹಣೆ ಕಾಗದ ರಹಿತ ವಹಿವಾಟಿನಲ್ಲಿ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಹಸ್ತಪ್ರತಿ ಆಧಾರಿತ 102 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ನೂರಕ್ಕೂ ಹೆಚ್ಚು ನಾಡು ನುಡಿ ಸಾಧಕರ ಸ್ವಾತಂತ್ರ ಹೋರಾಟಗಾರರ, ಯೋಧರ ಆಡಳಿತಗಾರರ, ಕಲಾವಿದರ ಧ್ವನಿಯನ್ನು ಸಂಗ್ರಹಿಸಲಾಗಿದ್ದು ಅಂತರ್ಜಾಲದಲ್ಲಿ ಅಳವಡಿಸಲಾಗಿದೆ. ಸುಮಾರು 60 ಸಾವಿರ ಪುಟಗಳ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ದಾಖಲೆಗಳನ್ನು ಲಿಪ್ಯಾಂತರ ಹಾಗೂ ಪ್ರಕಟಣಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಂಗ್ಲೆಂಡಿನಲ್ಲಿರುವ ಭಾರತದ ಗ್ರಂಥಾಲಯದಲ್ಲಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ 20 ಸಾವಿರ ಪುಟಗಳ ದಾಖಲೆಗಳನ್ನು ಸಂಗ್ರಹಣೆ ಮಾಡಲಾಗಿದ್ದು 72 ಸಂಪುಟಗಳಲ್ಲಿ ಸಂಶೋಧಕರಿಗೆ ಮಾಹಿತಿ ನೀಡಲಾಗಿದೆ.
ಹೈದ್ರಾಬಾದ್ ಕರ್ನಾಟಕ ಭಾಗದ ಕಲಬುರಗಿಯಲ್ಲಿ ವಿಭಾಗೀಯ ಮಟ್ಟದ ಕಛೇರಿಯನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದ ಸಚಿವೆ ಉಮಾಶ್ರೀ ಅವರು ಐತಿಹಾಸಿಕ ದಾಖಲೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.