ಬೆಂಗಳೂರು: ದುಬಾರಿ ಬೆಲೆಗೆ ಖನಿಜಯುಕ್ತ ಕುಡಿಯುವ ನೀರನ್ನು ಮಾರುವುದು ಗಂಭೀರ ಅಪರಾಧ. ಮೊದಲ ಬಾರಿ ತಪ್ಪು ಮಾಡಿದರೆ ರೂ2,000 ದಂಡ. ಪುನರಾವರ್ತನೆ ಮಾಡಿದರೆ 6 ತಿಂಗಳು ಜೈಲು ಶಿಕ್ಷೆ ಖಚಿತ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದರು.
ಸಾರ್ವಜನಿಕರಿಂದ ಬಂದಿರುವ ದೂರು ಆಧರಿಸಿ ರಾಜ್ಯದ ವಿವಿಧ ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು, ಮಲ್ಟಿಪ್ಲೆಕ್ಸ್‌ಗಳ ಮಳಿಗೆಗಳ ಮೇಲೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಕುರಿತು ಸಚಿವರು ಮಾಹಿತಿ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಂಗಳೂರು ಸೇರಿದಂತೆ 188 ಕಡೆ ದಾಳಿ ನಡೆಸಿ, 46 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದು, 20 ರ ಬೆಲೆಯ ಒಂದು ಲೀಟರ್ ನೀರಿನ ಬಾಟಲಿಯನ್ನು ₹ 50 ರಿಂದ ₹100 ಬೆಲೆಗೆ ಮಾರುತ್ತಿರುವ ಬಗ್ಗೆ ದೂರು ಬಂದಿತ್ತು. ಬೆಂಗಳೂರು ನಗರದಲ್ಲಿ 8 ಮತ್ತು ರಾಜ್ಯದ ವಿವಿಧೆಡೆ 39 ತಂಡಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು ಎಂದರು.
ಪಂಚತಾರಾ ಮತ್ತು ಐಷಾರಾಮಿ ಹೊಟೇಲುಗಳ ಮೇಲೂ ಮುಂದಿನ ದಿನಗಳಲ್ಲಿ ದಾಳಿ ನಡೆಯಲಿದ್ದು, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಮಳಿಗೆಗಳ ಮೇಲೂ ದಾಳಿ ನಡೆಸಲಾಗಿತ್ತು ಎಂದು ಅವರು ತಿಳಿಸಿದರು.
ಕೆಲವರು ಕಾನೂನಿನಲ್ಲಿರುವ ಲೋಪ ದೋಷಗಳನ್ನು ಬಳಸಿಕೊಂಡು ಅಕ್ರಮದಲ್ಲಿ ತೊಡಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಕುಡಿಯುವ ನೀರನ್ನೂ ಅಗತ್ಯ ಪದಾರ್ಥಗಳ ಪಟ್ಟಿಗೆ ಸೇರಿಸಬೇಕು. ಮಲ್ಟಿಪ್ಲೆಕ್ಸ್‌ಗಳಲ್ಲಿ ಜನರಿಗೆ ಮೋಸ ಮಾಡಿ ಅಧಿಕ ಬೆಲೆಗೆ ಕುಡಿಯುವ ನೀರಿನ ಬಾಟಲಿಗಳನ್ನು ಮಾರುವುದರ ವಿರುದ್ಧ ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದರು.