ಬೆಂಗಳೂರು: ವೃತ್ತಿ ಜೀವನದ ಕನಸೊಂದನ್ನು ನನಸು ಮಾಡಿದ ಕೊಡಗು ಮೂಲದ ಟೆನಿಸ್ ಆಟಗಾರ ಮಚ್ಚಂಡ ರೋಹನ್ ಬೋಪಣ್ಣ ಪ್ಯಾರಿಸ್ ನಲ್ಲಿ ನಡೆದ ಫ್ರೆಂಜ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ಇವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪರವಾಗಿ ಅಭಿನಂದಿಸಿ, 10ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ. ಆ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಹಾಗೆ ನೋಡಿದರೆ ಈ ಮಟ್ಟಕ್ಕೆ ಹೋಗುವಲ್ಲಿ ಬೋಪಣ್ಣ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಇದರ ಹಿಂದೆ ಸುಮಾರು 14 ವರ್ಷಗಳ ಪರಿಶ್ರಮವಿದೆ. ಕೊಡಗಿನ ಮಾದಾಪುರ ಮೂಲದ ಮಲ್ಲಿಕಾ ಮತ್ತು ಬೋಪಣ್ಣ ದಂಪತಿ ಪುತ್ರರಾದ ರೋಹನ್ ಬೋಪಣ್ಣ ಇತ್ತೀಚೆಗೆ ನಡೆದ ಪ್ರತಿಷ್ಠಿತ ಫ್ರೆಂಚ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ಚಾಂಪಿಯನ್ ಶಿಪ್ ನಲ್ಲಿ ಜತೆಗಾರ್ತಿ ಕೆನಡಾದ ಗ್ಯಾಬ್ರಿಯೆಲಾದಬ್ರೋಸ್ಕಿ ಅವರೊಂದಿಗೆ ಪ್ರಶಸ್ತಿಗೆ ಬಾಜನರಾಗಿದ್ದರು.
ವೃತ್ತಿ ಜೀವನದಲ್ಲಿ ಎರಡನೇ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಹಂತಕ್ಕೆ ತಲುಪಿದ ರೋಹನ್, ಎರಡನೇ ಬಾರಿ ದೊರೆತ ಅವಕಾಶದಲ್ಲಿ ಯಶಸ್ಸು ಕಂಡಿದ್ದಾರೆ. ಆ ಮೂಲಕ ಮಹೇಶ್ ಭೂಪತಿ, ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಬಳಿಕ ಇದೀಗ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗಳಿಸಿರುವ ದೇಶದ 4ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ 2010ರಲ್ಲಿ ಯು.ಎಸ್. ಓಪನ್ ಟೂರ್ನಿಯಲ್ಲಿ ಪಾಕಿಸ್ತಾನದ ಖುರೈಷಿ ಜೋಡಿಯೊಂದಿಗೆ ಪ್ರಶಸ್ತಿ ಹಂತಕ್ಕೆ ತಲುಪಿದ್ದ ರೋಹನ್ ಫೈನಲ್ ನಲ್ಲಿ ಅಮೇರಿಕಾದ ಬಾಬ್ – ಮೈಕ್ ಜೋಡಿ ಎದುರು ಸೋಲು ಅನುಭವಿಸಿ ನಿರಾಶೆಗೊಳಗಾಗಿದ್ದರು. ಇದೀಗ 7 ವರ್ಷಗಳ ಬಳಿಕ ಪ್ಯಾರೀಸ್ ನಲ್ಲಿ ನಡೆದ ಫೈನಲ್ನಲ್ಲಿ ವಿಶ್ವದ 7ನೇ ಶ್ರೇಯಾಂಕದ ಇಂಡೋ – ಕೆನಡಾ ಜೋಡಿಯಾದ ರೋಹನ್ ಹಾಗೂ ಗ್ಯಾಬ್ರಿಯೆಲಾ, ಜರ್ಮನಿಯ ಅನ್ನಾಲೀನಾ ಗ್ರೋಯೆನ್ ಫೆಲ್ಡ್ ಹಾಗೂ ಕೊಲಂಬಿಯಾದ ರಾಬರ್ಟ್ ಫರಾ ಜೋಡಿಯನ್ನು ಒಂದು ಗಂಟೆ ಆರು ನಿಮಿಷ ಹೋರಾಟದಲ್ಲಿ 2-6, 6-2, 12-10 ರಿಂದ ಸೋಲಿಸುವ ಮೂಲಕ ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದನ್ನು ಸ್ಮರಿಸಬಹುದಾಗಿದೆ.