ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ 2,500 ಮದ್ಯದಂಗಡಿಗಳ ಸ್ಥಳಾಂತರ ಅನಿವಾರ್ಯವಾಗಿದ್ದು, ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮದ್ಯದಂಗಡಿಗಳ ಸ್ಥಳಾಂತರದಿಂದಾಗಿ ಸುಮಾರು 50 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನಗರ ಪ್ರದೇಶಗಳಲ್ಲಿ ಹೆದ್ದಾರಿ ಬದಿಯಿಂದ 500 ಮೀಟರ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 220 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ರಾಜ್ಯದಾದ್ಯಂತ ಇದುವರೆಗೆ 38 ಅಂಗಡಿಗಳು ಸ್ಥಳಾಂತರ ಆಗಿವೆ. ಉಳಿದ ಅಂಗಡಿಗಳನ್ನು ಇದೇ 30ರೊಳಗೆ ಸ್ಥಳಾಂತರ ಮಾಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋರ್ಟ್ ಆದೇಶದಿಂದಾಗಿ ಸ್ಥಳಾಂತರ ಮಾಡಬೇಕಿರುವ ಅಂಗಡಿಗಳ ಬಗ್ಗೆ ಅಬಕಾರಿ ಇಲಾಖೆ ಸಮೀಕ್ಷೆ ನಡೆಸಿದ್ದು, ಒಟ್ಟಾರೆ 6.015 ಅಂಗಡಿಗಳು ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಇದರಲ್ಲಿ 2,500 ಅಂಗಡಿಗಳು ಗ್ರಾಮೀಣ ಪ್ರದೇಶದಲ್ಲಿವೆ. ಮದ್ಯದಂಗಡಿ ಸ್ಥಳಾಂತರ ಅತ್ಯಂತ ದುಬಾರಿ ಆಗುವುದರಿಂದ ಬಹುತೇಕರು ಬಾಗಿಲು ಮುಚ್ಚುವ ಬಗ್ಗೆ ಆಲೋಚಿಸುತ್ತಿದ್ದಾರೆ. ಅಂಗಡಿಗಳ ಸ್ಥಳಾಂತರ ಮಾಡಲು ರಸ್ತೆ ಬದಿಯಿಂದ 220 ಮೀಟರ್ ದೂರದಲ್ಲಿ ಜಾಗ ಹುಡುಕಬೇಕು. ಗ್ರಾಮ ಪಂಚಾಯ್ತಿ ಅನುಮತಿ ಪಡೆಯಬೇಕು. ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಮಾಡಬೇಕು. ಮಳಿಗೆ ನಿರ್ಮಿಸಬೇಕು. ರಾಜ್ಯದ ಮನವಿಗೆ ಕೇಂದ್ರ ಸ್ಪಂದಿಸಿದರೆ ನಗರ ಮತ್ತು ಪಟ್ಟಣ ಪ್ರದೇಶಗಳ ಹೆದ್ದಾರಿ ಬದಿಯ 3,515 ಅಂಗಡಿಗಳು ಉಳಿದುಕೊಳ್ಳಲಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ 220 ಮೀಟರ್ ದೂರಕ್ಕೆ ಮದ್ಯದಂಗಡಿಗಳು ಸ್ಥಳಾಂತರ ಆಗುವುದು ಅನಿವಾರ್ಯ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.