ಬೆಂಗಳೂರು: ತಮ್ಮ ಸಮುದಾಯವನ್ನು ಸಂಘಟಿಸುವ ಮೂಲಕ ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡರಾಗಿ ಗುರುತಿಸಿಕೊಂಡು ಕಾಂಗ್ರೆಸ್ ನಲ್ಲಿ ಛಾಪು ಮೂಡಿಸಿದ್ದ ಕೆ.ಪಿ.ನಂಜುಂಡಿ ಅವರು ಕಾಂಗ್ರೆಸ್ ತೊರೆದ ಬಳಿಕ ಇದೀಗ ಬಿಜೆಪಿಗೆ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ನಲ್ಲಿ ತನ್ನ ಪ್ರಭಾವ ಮೆರೆದಿದ್ದರೂ ಕೇವಲ ಮುಖಂಡ ಎಂಬುದಷ್ಟೆ ಅಲ್ಲಿ ದಕ್ಕಿತ್ತಾದರೂ ಯಾವುದೇ ಸ್ಥಾನಮಾನ ಲಭಿಸಿರಲಿಲ್ಲ. ಇದರಿಂದ ಬೇಸತ್ತ ನಂಜುಂಡಿ ಅವರು ಕೈಗೆ ರಾಜೀನಾಮೆ ನೀಡಿ ಕಮಲದತ್ತ ಹೊರಳಿದ್ದಾರೆ. ಇಷ್ಟಕ್ಕೂ ಬಿಜೆಪಿಯಲ್ಲಿ ಅವರಿಗೆ ಯಾವ ರೀತಿಯ ಸ್ಥಾನ ಮಾನ ನೀಡುತ್ತಾರೋ ಎಂಬುದು ಗೊತ್ತಾಗಲಿಲ್ಲವಾದರೂ ಯಾವುದಾದರೊಂದು ಕ್ಷೇತ್ರದಿಂದ ಟಿಕೆಟ್ ಸಿಗುವುದಂತು ಖಚಿತ ಎನ್ನಲಾಗುತ್ತಿದೆ.
ಈಗಾಗಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಡಾಲರ್ಸ್ ಕಾಲೋನಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಪ್ರತಿ ಸಮುದಾಯದ ನಾಯಕರನ್ನು ಪಕ್ಷಕ್ಕೆ ಸೆಳೆದು ಅಡಿಪಾಯ ಗಟ್ಟಿಗೊಳಿಸುವುದರಲ್ಲಿ ನಿರತರಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಇದೀಗ ನಂಜುಂಡಿ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸುವ ಮೂಲಕ ಆ ಸಮುದಾಯದ ಒಲವು ಪಡೆಯುವ ಉದ್ದೇಶವನ್ನು ಹೊಂದಿದ್ದಾರೆ.
ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರಾಜಕೀಯ ಸ್ಥಾನಮಾನ ನಂಜುಂಡಿ ಅವರಿಗೆ ಸಿಕ್ಕಿರಲಿಲ್ಲ. ಹೀಗಾಗಿಯೆ ಅವರು ಕಳೆದ ಎರಡು ವಾರಗಳ ಹಿಂದೆಯೇ ವಿಶ್ವಕರ್ಮ ಸಮುದಾಯದ ಮಠಾಧೀಶರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ತ್ಯಜಿಸುವ ತೀರ್ಮಾನ ಪ್ರಕಟಿಸಿದ್ದರು. ಇದೀಗ ಬಿಜೆಪಿ ಸೇರುವ ಒಲವು ತೋರಿದ್ದು, ಖುದ್ದು ಯಡಿಯೂರಪ್ಪ ಅವರೇ ಭೇಟಿ ನೀಡಿ ಚರ್ಚೆ ಮಾಡಿರುವುದು ಕುತೂಹಲ ಕೆರಳಿಸಿದೆ. ಚುನಾವಣೆ ಹತ್ತಿರವಾಗುತ್ತಿರುವುದರಿಂದ ಪಕ್ಷದಿಂದ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಪ್ರಕ್ರಿಯೆಗಳು ನಡೆಯಲಿವೆ. ಇದರ ಮೊದಲ ಮೆಟ್ಟಿಲು ಎಂಬಂತೆ ನಂಜುಂಡಿ, ವಿಶ್ವನಾಥ್ ಮೊದಲಾದವರೆಲ್ಲ ಕಾಂಗ್ರೆಸ್ ತೊರೆಯುತ್ತಿದ್ದು ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.