ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಸರ್ಕಾರಕ್ಕೆ ಸಿಕ್ಕಿರುವುದರಿಂದ ಜೋಶ್ ನಲ್ಲಿರುವ ರಾಜ್ಯಸರ್ಕಾರ ಅವಧಿಗೂ ಮುನ್ನ ಸರ್ಕಾರವನ್ನು ವಿಸರ್ಜಿಸಿ ಚುನಾವಣೆ ಹೋಗಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂಬ ವದಂತಿಗಳು ರಾಜಕೀಯ ಪಡಸಾಲೆಯಿಂದ ಬರತೊಡಗಿದೆ.
ರೈತರ ಸಾಲಮನ್ನಾದ ಬಳಿಕ ಉತ್ತಮ ಬೆಂಬಲದ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋದರೆ ಗೆಲುವನ್ನು ಸಾಧಿಸಲು ಸಾಧ್ಯವಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗುತ್ತಿದೆ.
ಸಾಲಮನ್ನಾ ಮಾಡುವಂತೆ ಪ್ರತಿಪಕ್ಷ ಬಿಜೆಪಿ ಹೋರಾಟ ಮಾಡುತ್ತಾ ಬಂದಿತ್ತು. ಸರ್ಕಾರ ತಕ್ಷಣಕ್ಕೆ ಸಾಲ ಮನ್ನಾ ಮಾಡಲ್ಲ ಇದನ್ನು ರಾಜಕೀಯವಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ರೈತರ ಅನುಕಂಪಗಳಿಸುವ ತಂತ್ರ ಬಿಜೆಪಿಯ ನಾಯಕರದ್ದಾಗಿತ್ತು. ಹೀಗಾಗಿ ಉಭಯ ಸದನಗಳಲ್ಲಿ ಸಭಾತ್ಯಾಗ ಮಾಡಲು ಮುಂದಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದ ಸಿದ್ದರಾಮಯ್ಯ 50ಸಾವಿರ ಸಾಲಮನ್ನಾ ಮಾಡುವ ತೀರ್ಮಾನವನ್ನು ಪ್ರಕಟಿಸಿ ಬಿಟ್ಟರು.
ಇದರಿಂದ ಬಿಜೆಪಿ ಮಂಕಾಗಿದೆ. ಇದೇ ವೇಳೆ ಚುನಾವಣೆಗೆ ಹೋದರೆ ಮುಂದಿನ ಬಿಜೆಪಿಯ ತಂತ್ರ ನಡೆಯುವುದಿಲ್ಲ ಎನ್ನುವುದು ಸಿಎಂನ ಆಲೋಚನೆ ಇರಬಹುದು. ಮುಂದಿನ ಡಿಸೆಂಬರ್ ವೇಳೆಗೆ ಚುನಾವಣೆ ನಡೆಯಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದಾರೆ. ಅದನ್ನು ಯಾವ ಲೆಕ್ಕಾಚಾರದಲ್ಲಿ ಅವರು ಹೇಳುತ್ತಿದ್ದಾರೆ ಎಂಬುದು ನಿಗೂಢವಾಗಿದೆ.
ಡಿಸೆಂಬರ್ ವೇಳೆಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲಿ ಗೆಲುವು ಬಿಜೆಪಿಗೆ ಅನಿವಾರ್ಯವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಆ ಕಡೆ ಹೆಚ್ಚಿನ ನಿಗಾ ವಹಿಸುವ ಸಾಧ್ಯತೆಯಿದೆ. ಇದೇ ವೇಳೆ ಕರ್ನಾಟಕದಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ತಂತ್ರ ನಡೆಸಲು ಕಷ್ಟವಾಗಬಹುದು.
ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬದಲಾವಣೆಯಾದ ನಂತರ ವೇಣುಗೋಪಾಲ್ ಪಕ್ಷದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಇರಾದೆ ಅವರದ್ದಾಗಿದೆ. ಹೀಗಾಗಿ ಅವರು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿದ್ದಾರೆ. ಈ ನಡುವೆ ಸಿಎಂ ನನ್ನ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂಬ ಘೋಷಣೆ ಮಾಡಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಚುನಾವಣೆ ಸನ್ನಿಹಿತ ಎಂದರೆ ತಪ್ಪಾಗಲಾರದು. ಎಲ್ಲದಕ್ಕೂ ಕಾದು ನೋಡುವುದು ಅನಿವಾರ್ಯ
ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗ್ತಾರಾ ಸಿಎಂ?
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.