ಬೆಂಗಳೂರು: ಹಾಜರಾತಿ ಕೊರತೆಯ ಕಾರಣ ನೀಡಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನೀಡದ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಎಂವಿಜೆ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬಳ್ಳಾರಿ ಮೂಲದ ಎರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಲೋಕೇಶ್ ಎಂಬಾತ ನಿನ್ನೆ ಸಂಜೆ ಹಾಸ್ಟೇಲಿನ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯ ಆತ್ಮಹತ್ಯೆಯಿಂದಾಗಿ ಇನ್ನುಳಿದ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಇತ್ತೀಚೆಗಷ್ಟೆ, ಹಾಜರಾತಿಯ ಕೊರತೆಯ ಕಾರಣ ನೀಡಿ ಕಾಲೇಜಿನ 67 ವಿದ್ಯಾರ್ಥಿಗಳ ಪರೀಕ್ಷೆಗೆ ಕಾಲೇಜು ಆಡಳಿತ ಮಂಡಳಿ ತಡೆನೀಡಿತ್ತು.
ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಪರೀಕ್ಷೆಯನ್ನು ತಡೆ ಹಿಡಿದು, ಹಾಲ್ ಟಿಕೇಟ್ ನೀಡಲು ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದ್ದರಿಂದ ತನ್ನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಲೋಕೇಶ್ ಆತ್ಮಮಾಡಿಕೊಂಡಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಕುರಿತು ಮತ್ತಷ್ಟು ತನಿಖೆ ನಡೆಯಬೇಕಿದೆ.