ಬೆಂಗಳೂರು: ರಂಜಾನ್ ಕಳೆದರೂ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಇಫ್ತಾರ್ಕೂಟದ ಕಾವು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಪರವಿರುದ್ಧದ ಹೇಳಿಕೆಗಳು ಕೇಳಿ ಬರುತ್ತಲೇ ಇದೆ.
ಈ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಗೊಂದಲವಿದ್ದು, ಕೆಲವರು ಪೇಜಾವರ ಶ್ರೀಗಳ ಪರ ಹೇಳಿಕೆ ನೀಡುತ್ತಿದ್ದರೆ, ಮತ್ತೆ ಕೆಲವರು ವಿರುದ್ಧದ ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಶ್ರೀಗಳ ಬೆನ್ನಿಗೆ ನಿಂತಿದ್ದು, ಪೇಜಾವರ ಶ್ರೀಗಳ ನಿರ್ಧಾರ ದೇಶಕ್ಕೆ ಮಾದರಿಯಾಗುವಂತಹದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪೇಜಾವರ ಶ್ರೀಗಳ ನಡೆ ಪ್ರಶಂಸನೀಯವಾದದ್ದು, ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗುವ ಕ್ರಮ ಇದಾಗಿದೆ. ಈ ನಿರ್ಧಾರವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಮಹಾತ್ಮ ಗಾಂಧೀಜಿಯವರು ಇಂತಹ ನಡೆಯನ್ನೇ ಬಯಸಿದ್ದರು. ಶಾಂತಿ, ಸೌಹಾರ್ದತೆಗಾಗಿ ಶ್ರೀಗಳ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪೇಜಾವರ ಶ್ರೀಗಳು ವಿಶಾಲ ಚಿಂತನೆಗೆ ನಾಂದಿಹಾಡಿದ್ದಾರೆ. ಅಂತಹ ಪ್ರಯತ್ನಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ಕೆಲವು ಶಕ್ತಿಗಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ಪ್ರಕರಣ ರಾಜಕೀಯವಾಗಿ ಬಳಕೆಯಾಗುವ ಸಾಧ್ಯತೆ ಜಾಸ್ತಿಯಾಗಿದೆ