ಬೆಂಗಳೂರು: ರಾಜ್ಯ ಸರ್ಕಾರ ತರಲುದ್ದೇಶಿಸಿರುವ ಮೂಢನಂಬಿಕೆ ನಿಷೇಧ ಕಾಯ್ದೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿಲಿದೆ ಎಂದು ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಮೂಢನಂಬಿಕೆ ನಿಷೇಧ ಕಾಯ್ದೆ ಕುರಿತಂತೆ ಈಗಾಗಲೇ ಜ್ಯೋತಿಷ್ಯ ಹೇಳುವುದು, ಮಡೆಸ್ನಾನ, ಪ್ರಾಣಿ ಹಿಂಸೆ ಸೇರಿದಂತೆ ಹಲವು ವಿಷಯಗಳಿಗೆ ಪರಿಷ್ಕೃತ ಕಾಯ್ದೆಯಲ್ಲಿ ಉಪಸಮಿತಿ ನಿಯಂತ್ರಣ ಹೇರಿರುವ ಮೂಲಕ ಕರಡು ಕಾಯ್ದೆ ಸಿದ್ಧಗೊಳಿಸಿ ವರದಿ ನೀಡಿದೆ ಇದನ್ನು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸಮಾಜದಲ್ಲಿ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಬೇಕಿದೆ. ಅಷ್ಟೇ ಅಲ್ಲದೆ ಪ್ರಬಲ ಹೋರಾಟವೂ ನಡೆಯಬೇಕಿದೆ. ಮೂಢನಂಬಿಕೆ ವಿರುದ್ಧ ಜನ ಜಾಗೃತರಾದಾಗ ಮಾತ್ರ ಅದನ್ನು ತೊಲಗಿಸಲು ಸಾಧ್ಯ. ಕಾನೂನಿಂದ ಮೂಢನಂಬಿಕೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದರು.
ಮೂಢನಂಬಿಕೆ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ನನ್ನ ಮೇಲೆ ಒತ್ತಡ ಹೇರಲು ಯಾರಿಗೂ ಸಾಧ್ಯವಿಲ್ಲ ನನ್ನ ಕೆಲಸ ನಾನು ಮಾಡುತ್ತೇನೆ. ಜನಕ್ಕೆ ಒಳ್ಳೆಯದಾಗುವ ಕೆಲಸ ಮಾಡುತ್ತಿದ್ದು, ಅದಕ್ಕೆ ಬರುವ ಅಡ್ಡಿ ಆತಂಕವನ್ನು ಸಮರ್ಪಕವಾಗಿ ಎದುರಿಸಲಾಗುತ್ತದೆ ಎಂದರು.