ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಟ್ಯಾಕ್ಸಿ ಮತ್ತು ಕ್ಯಾಬ್ ಗಳಿಗೂ ಸ್ಪೀಡ್ ಗವರ್ನರ್ ಅಳವಡಿಕೆಗೆ ನಿರ್ಧರಿಸಿದ್ದು, 9ಕ್ಕಿಂತ ಕಡಿಮೆ ಅಸನ ವ್ಯವಸ್ಥೆಯ ವಾಹನಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, 9ಕ್ಕಿಂತ ಕಡಿಮೆ ಆಸನಗಳಿರುವ ಎಂ-1ಸರಣಿಯ ಹಳದಿ ಬೋರ್ಡ್ ವಾಹನಗಳಲ್ಲಿ ಹಾಗೂ 3.5ಟನ್ ಗಿಂತ ಕಡಿಮೆ ಸಾಮರ್ಥ್ಯದ ಸರಕು ಸಾಗಣೆ ವಾಹನಗಳಿಗೂ ಸ್ಪೀಡ್ ಗವರ್ನರ್ ಅಳವಡಿಸುವ ಪ್ರಸ್ತಾವನೆಯನ್ನು ಇಲಾಖೆ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ನಿಯಮ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ನೋಂದಣಿಯಾಗುವ ಕಾರು ಮತ್ತು 9ಕ್ಕಿಂತ ಕಡಿಮೆ ಆಸನದ ಹಳದಿ ಬೋರ್ಡ್ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಮಾಡಲಾಗುತ್ತದೆ. ಈ ಬಗ್ಗೆ ಇತ್ತೀಚೆಗಷ್ಟೇ ಸುತ್ತೋಲೆ ಹೊರಡಿಸಲಾಗಿದ್ದು, ವಾಹನಗಳ ವೇಗದ ಮಿತಿಯನ್ನು 80.ಮೀಗೆ ಮಿತಿಗೊಳಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ಹೈಕೋರ್ಟ್ ಕೂಡ ಈ ಬಗ್ಗೆ ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. 9 ಕ್ಕಿಂತ ಕಡಿಮೆ ಆಸನದ ಮತ್ತು 3.5 ಟನ್ ಗಿಂತ ಕಡಿಮೆ ಸಾಮರ್ಥ್ಯದ ಎಲ್ಲ ಸರಕ ಸಾಗಾಣಿಕಾ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ ಮಾಡಲಾಗುತ್ತದೆ. ಒಂದು ವೇಳೆ ಯಾವುದೇ ವಾಹನ ಸ್ಪೀಡ್ ಗವರ್ನರ್ ಅಳವಡಿಸಿಕೊಳ್ಳದಿದ್ದರೆ ಅಂತಹ ವಾಹನಗಳಿಗೆ ಫಿಟ್ ನೆಸ್ ಸರ್ಟಿಫಿಕೇಟ್ ನೀಡದಂತೆ ಆದೇಶಿಸಲಾಗುತ್ತದೆ ಎಂದೂ ರಾಮಲಿಂಗಾ ರೆಡ್ಡಿ ತಿಳಿಸಿದರು.
ಈ ಹಿಂದೆ ಭಾರಿ ಸರಕು ಸಾಗಾಣಿಕಾ ಲಾರಿಗಳು, ಟ್ರಕ್ ಗಳು ಮತ್ತು ಬಸ್ ಗಳಿಗೆ ಮಾತ್ರ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯವಾಗಿತ್ತು. ಇದೀಗ ಹಳದಿ ಬೋರ್ಡ್ ನ ಕಾರುಗಳಿಗೂ ಸ್ಪೀಡ್ ಗವರ್ನರ್ ಕಡ್ಡಾಯ ಮಾಡುವ ತೀರ್ಮಾನಕ್ಕೆ ಸರ್ಕಾರ ಬಂದಿದೆ.