ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿಗೆ ಚಾಕೂ ಇರಿದಿದ್ದ ಆರೋಪಿ ತೇಜರಾಜ್ ಶರ್ಮಾಗೆ ಮಂಪರು ಪರೀಕ್ಷೆ ವೇಳೆ ವಿಚಿತ್ರವಾದ ಕಾರಣಗಳನ್ನು ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಆತನನ್ನು ಮಂಪರು ಪರೀಕ್ಷೆ ಒಳಪಡಿಸಲು ಗುಜರಾತ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆತ ‘ಭಗವಂತ ಹೇಳಿದ್ದರಿಂದ ನಾನು ವಿಶ್ವನಾಥ ಶೆಟ್ಟಿ ಅವರನ್ನು ಕೊಲೆ ಮಾಡಲು ಯತ್ನಿಸಿದೆ’ ಎಂದು ಹೇಳಿದ್ದಾನೆ.
‘ಭ್ರಷ್ಟರನ್ನು ಕೊಲ್ಲುವಂತೆ ಶ್ರೀಕೃಷ್ಣ ನನಗೆ ಹೇಳಿದ್ದ ಹಾಗಾಗಿ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯನ್ನು ಕೊಲೆ ಮಾಡಲು ಮುಂದಾದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
‘ಸಾಕಷ್ಟು ಭಾರಿ ಭ್ರಷ್ಟ ಅಧಿಕಾರಿಗಳ ಬಗ್ಗೆ ವಿಶ್ವನಾಥ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದೆ, ಆದರೆ ಅವರು ಏನೂ ಮಾಡದೆ, ಕೇಳಿದಾಗಲೆಲ್ಲಾ ನಗುತ್ತಲೇ ಉತ್ತರ ಹೇಳಿ ನನ್ನನ್ನು ಕಳುಹಿಸಿ ಬಿಡುತ್ತಿದ್ದರು ಆದ್ದರಿಂದ ದೇವರ ಆಜ್ಞೆಯಂತೆ ಭ್ರಷ್ಟಾಚಾರಿಯನ್ನು ಕೊಲ್ಲಲು ನಾನು ಹಾಗೆ ಮಾಡಿದೆ ಎಂದಿದ್ದಾನೆ.
ಘಟನೆ ಹಿನ್ನೆಲೆ: ಮಾರ್ಚ್ 7ರಂದು ಲೋಕಾಯುಕ್ತ ಕಚೇರಿಯಲ್ಲಿಯೇ ವಿಶ್ವನಾಥ ಶೆಟ್ಟಿ ಅವರಿಗೆ ತೇಜರಾಜ್ ಚಾಕು ಇರಿದಿದ್ದ. ಆ ನಂತರ ಆತನನ್ನು ವಶಪಡಿಸಿಕೊಳ್ಳಲಾಗಿತ್ತು. ತೇಜ್‌ರಾಜ್ ವಿರುದ್ಧ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದ್ದು, ವಿಶ್ವನಾಥ ಶೆಟ್ಟಿ ಅವರು ಇನ್ನಷ್ಟು ತನಿಖೆಗೆ ಒತ್ತಾಯಿಸಿದ್ದರಿಂದ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ.