ಬೆಂಗಳೂರು: ಗಾಂಜಾ ನಶೆಯಲ್ಲಿ ಯುವಕನೊಬ್ಬ ಆಸ್ಟಿನ್ ಟೌನ್‌ನ ಮನೆಯೊಂದಕ್ಕೆ ನುಗ್ಗಿ 22 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಇನ್ನೂ ಕಾಮುಕನ ಕ್ರೂರತೆಗೆ ಅಸ್ವಸ್ಥಗೊಂಡ ಯುವತಿಯನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಮೊಹಮ್ಮದ್ ಜಾವೀದ್ (35) ಎಂಬಾತನನ್ನು ಅಶೋಕನಗರ ಪೊಲೀಸರು ಬಂಧಿಸಿ ದ್ದಾರೆ. ನ್ಯಾಯಾಧೀಶರ ಸೂಚನೆ ಮೇರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಆಸ್ಟಿನ್ ಟೌನ್ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಯುವತಿ ಮನೆ ಖಾಲಿ ಮಾಡಲು ನಿರ್ಧರಿಸಿ ರಾತ್ರಿ 7.30ಕ್ಕೆ ಲಗೇಜುಗಳನ್ನು ಜೋಡಿಸುತ್ತಿದ್ದಳು. ಆವಾಗ ಮನೆಗೆ ಬಂದ ಆರೋಪಿ ಈ ಕೃತ್ಯವನ್ನು ಎಸಗಿದ್ದಾನೆ.
ಈತನನ್ನು ಕಂಡ ಕೂಡಲೇ ಕಿರುಚಾಡಿದ ಯುವತಿ ಮನೆಯಿಂದ ಹೊರ ನಡೆಯಲು ಯತ್ನಿಸಿದ್ದಾಳೆ. ಆರೋಪಿ ಬಾಗಿಲನ್ನು ಹಾಕಿ ಆಕೆಯನ್ನು ಕೋಣೆಗೆ ಕರೆದೊಯ್ದು ಆತ್ಯಾಚಾರ ಎಸಗಿದ್ದಾನೆ. ವಿಚಾರವನ್ನು ಹೊರಗಡೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ. ನಂತರ ಆತನಿಂದ ತಪ್ಪಿಸಿಕೊಂಡ ಯುವತಿ ಶೌಚಾಲಯದಲ್ಲಿ ಅವಿತು ಮನೆ ಮಾಲೀಕನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಮನೆ ಮಾಲೀಕ ಬಂದು ಬಾಗಿಲನ್ನು ಒಡೆದು ಯುವತಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ನೀಡಿದ ಮಾಹಿತಿ ಮೇರೆಗೆ ಕೆಲವೇ ಗಂಟೆಗಳಲ್ಲಿ ಕಾಮುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉದ್ರೇಕದ ಮಾತ್ರೆ ನುಂಗಿ ಅತ್ಯಾಚಾರ: ಆರೋಪಿ ಹೈದರಾಬಾದ್ ನಿವಾಸಿಯಾಗಿದ್ದು, ಯುವತಿಯ ಪಕ್ಕದ ಮನೆಯಲ್ಲೇ ನೆಲೆಸಿದ್ದ. ಯುವತಿ ಮನೆ ಖಾಲಿ ಮಾಡುತ್ತಿರುವುದನ್ನು ತಿಳಿದ ಆರೋಪಿ ಇನ್ನು ಈಕೆ ಸಿಗಲ್ಲ ಎಂದುಕೊಂಡು ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಉದ್ರೇಕದ ಮಾತ್ರೆಗಳನ್ನು ನುಂಗಿದ್ದ ಎಂದು ದೃಢಪಟ್ಟಿದೆ.