ಬೆಂಗಳೂರು: ಗಣೇಶ ಚತುರ್ಥಿಯ ಅಂಗವಾಗಿ ನಗರದಲ್ಲಿ ಪ್ರಪ್ರಥಮ ಬಾರಿಗೆ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ನಿರ್ಮಿಸಲಾಗಿರುವ 4000 ಕೆಜಿ ತೂಕದ ಬೃಹದಾಕಾರದ ಲಾಡನ್ನು ಇಂದು ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳಿಸಲಾಯಿತು.
ಇದೇ ವೇಳೆ 50 ಟನ್ ಕಬ್ಬಿನಲ್ಲಿ ಮಾಡಿದ ನಗರದಲ್ಲೇ ಅತಿದೊಡ್ಡ ಪರಿಸರ ಸ್ನೇಹೀ ಗಣಪತಿಯನ್ನು ಪ್ರತಿಷ್ಠಾಪಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ಹೇಳಿದರು.
ಪ್ರತಿಬಾರಿ ಏನಾದರೂ ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ 4 ಸಾವಿರ ತೂಕದ ಬೃಹತ್ ಲಾಡು ನಿರ್ಮಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ಈ ಬೃಹತ್ ಗಾತ್ರದ ಲಾಡು ನಿರ್ಮಿಸಲು 1000 ಕೆಜಿ ಕಡಲೆ ಹಿಟ್ಟು, 2000 ಕೆಜಿ ಸಕ್ಕರೆ, 700 ಕೆಜಿ ಸನ್ ಪ್ಯೂರ್ ಎಣ್ಣೆ, 300 ಕೆಜಿ ತುಪ್ಪ, 50 ಕೆಜಿ ಗೋಡಂಬಿ, 50 ಕೆಜಿ ಒಣ ದ್ರಾಕ್ಷಿ, 5 ಕೆಜಿ ಏಲಕ್ಕಿಯನ್ನು ಬಳಸಿ ಬೃಹತ್ ಗಾತ್ರದ ಲಾಡು ನಿರ್ಮಿಸಲಾಗುವುದು ಎಂದರು.
ಅಲ್ಲದೆ, ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ಬಾರಿ 30 ಅಡಿ ಎತ್ತರದ ಕಬ್ಬಿನಲ್ಲಿಯೇ ನಿರ್ಮಿಸಲಾಗಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುವುದು. ಈ ಮೂರ್ತಿ ಪರಿಸರ ಸ್ನೇಹಿಯಾಗಿರಲಿದೆ. ಅಲ್ಲದೆ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯನ್ನು ಉಂಟು ಮಾಡದ ರೀತಿಯಲ್ಲಿ ನಿರ್ಮಿಸಲಾಗುವುದು. 50 ಟನ್ ಕಬ್ಬನ್ನು ಬಳಸಲಾಗಿದ್ದು, 50ಕ್ಕೂ ಹೆಚ್ಚು ಕಾರ್ಮಿಕರು ಈ ಗಣಪತಿಯನ್ನು ನಿರ್ಮಿಸಲು ಹಗಲಿರುಳು ಶ್ರಮಿಸಿದ್ದಾರೆ ಎಂದರು.
ಗೌರಿ ಹಬ್ಬದ ದಿನದಿಂದ ಈ ಬೃಹತ್ ಲಾಡು ಹಾಗೂ ಕಬ್ಬಿನ ಗಣಪತಿಯನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದರು.