ಬೆಂಗಳೂರು: ಅಪರಿಚಿತ ವಾಹನವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗು ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ಹೆಬ್ಬಾಳದ ಲುಂಬಿಣಿ ಗಾರ್ಡನ್ ಬಳಿ ಸಂಭವಿಸಿದೆ.
ಡಿಕ್ಕಿ ಹೊಡೆದ ವಾಹನವು ನಿಲ್ಲಿಸದೆ ಪರಾರಿಯಾಗಿದೆ. ಬ್ಯಾಟರಾಯನಪುರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಪೂಜೆ ಮುಗಿಸಿಕೊಂಡು ಹಿಂತಿರುಗುತ್ತಿದ್ದ ರಘು ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪರಾರಿಯಾಗಿದೆ. ಅಪಘಾತದಲ್ಲಿ ರಘು ಅವರ ಪತ್ನಿ ಸುರೇಖಾ(30) ಮತ್ತು ಮೂರು ವರ್ಷದ ಮಗು ಆರಾದ್ಯ ಮೃತಪಟ್ಟಿದೆ. ರಘು ಗಾಯಗೊಂಡಿದ್ದಾರೆ.
ಲುಂಬಿನಿ ಗಾರ್ಡನ್ ಬಳಿ ಬರುತ್ತಿದ್ದ ವೇಳೆ ಹಿಂದಿನಿಂದ ವಾಹನವೊಂದು ಡಿಕ್ಕಿ ಹೊಡೆದ ರಭಸಕ್ಕೆ ತಾಯಿ ಮಗು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಅವರಿಬ್ಬರ ಮೇಲೆ ವಾಹನ ಹರಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ನಡೆದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ಪರಿಶೀಲನೆ ಮಾಡುತ್ತಲಿದ್ದೇವೆ. ಕಾರು ಅಥವಾ ಸರಕು ಸಾಗಣಿ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.