ಬೆಂಗಳೂರು: ನಗರದಲ್ಲಿ ಮೊದಲ ಬಾರಿಗೆ ಆರಂಭಗೊಂಡಿದ್ದ ಬಿಟ್ ಕಾಯಿನ್ ಎಟಿಎಂ ಘಟಕಕ್ಕೆ ಸೈಬರ್ ಕ್ರೈಂ ಪೊಲೀಸರು ಬೀಗ ಜಡಿದಿದ್ದಾರೆ.
ಸೈಬರ್ ಕ್ರೈಂ ಪೊಲೀಸರು ಯುನೋಕಾಯಿನ್ ಪ್ರೈವೆಟ್ ಲಿಮಿಡೆಡ್ ಕಂಪೆನಿ ಹೆಸರಿನಲ್ಲಿ ಈ ಎಟಿಎಂನ್ನು ಆರಂಭಿಸಲಾಗಿತ್ತು. ಇದನ್ನು ಆರಂಭಿಸಿದ ತುಮಕೂರಿನ ಬಿ.ವಿ. ಹರೀಶ್(37) ಎಂಬವರನ್ನು ಬಂಧಿಸಲಾಗಿದೆ.
ಡಿಜಿಟಲ್ ಕರೆನ್ಸಿ ವ್ಯವಹಾರಕ್ಕೆ ನಿರ್ಬಂಧವಿದ್ದರೂ ಕಂಪೆನಿಯು ಹಳೆ ವಿಮಾನ ನಿಲ್ದಾಣ ರಸ್ತೆಯ ಕೆಂಪ್ ಪೋರ್ಟ್ ಮಾಲ್ ನಲ್ಲಿ ಅ.19ರಂದು ಬಿಟ್ ಕಾಯಿನ್ ಘಟಕ ಪ್ರಾರಂಭ ಮಾಡಿತ್ತು.
ನಿನ್ನೆ ಸೈಬರ್ ಕ್ರೈಂ ಪೊಲೀಸರು ಹರೀಶ್ ಕಚೇರಿ ಮೇಲೆ ದಾಳಿ ಮಾಡಿ ಎರಡು ಲ್ಯಾಪ್ ಟಾಪ್, ಆರು ಡೆಬಿಟ್/ಕ್ರೆಡಿಟ್ ಕಾರ್ಡ್ ಗಳು, ಕಂಪೆನಿಯ ಸೀಲುಗಳು, ಕ್ರಿಪ್ಟೋ ಕರೆನ್ಸಿಯ ಡಿವೈಸ್ ಹಾಗೂ 1.79 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಏನಿದು ಬಿಟ್ ಕಾಯಿನ್?
ಇದು ಒಂದು ರೀತಿಯ ನಿಗೂಢ ಹಣ(ಕ್ರಿಪ್ಟೊ ಕರೆನ್ಸಿ). ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಇದು ಅಂಕಿಗಳ ರೂಪದಲ್ಲಿ ಮಾತ್ರ ಕಾಣುವುದು. 2009ರಲ್ಲಿ ಕ್ರಿಪ್ಟೋಗ್ರಫಿ ಎಂಬ ತಂತ್ರಜ್ಞಾನದಿಂದ ಈ ಡಿಜಿಟಲ್ ಕರೆನ್ಸಿ ಸೃಷ್ಟಿಸಲಾಗಿದೆ.