ಬೆಂಗಳೂರು: ಕಾಂಗ್ರೆಸ್ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು ದೊಡ್ಡ ಆಘಾತವಾಗಿ ಪರಿಣಮಿಸಿದೆ.
ಆನಂದ್ ಸಿಂಗ್ ಅವರು ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರವಾನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಅವರು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸರ್ಕಾರಿ ಭೂಮಿಯನ್ನು ಜಿಂದಾಲ್ ಕಂಪೆನಿಗೆ ಪರಭಾರೆ ಮಾಡುವುದನ್ನು ವಿರೋಧಿಸಿ ತಾನು ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಆನಂದ್ ಸಿಂಗ್ ಅವರು ಇಂದು ಮಧ್ಯಾಹ್ನ ವೇಳೆ ರಾಜ್ಯಪಾಲರ ಬಳಿಗೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾನು ಸ್ಪೀಕರ್ ಅವರಿಗೂ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ಇದು ಅವರಿಗೆ ಸಿಕ್ಕಿಲ್ಲ. ಇನ್ನೊಮ್ಮೆ ಇದನ್ನು ಸಲ್ಲಿಸುತ್ತೇನೆ ಎಂದರು.