ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪರಿಚಿತರು ಅಪಹರಿಸಿಕೊಂಡು ಹೋಗಿ ಮೂರು ದಿನಗಳ ಕಾಲ ಕೂಡಿ ಹಾಕಿ 30 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಅವರು ದೂರಿದ್ದಾರೆ.
ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅಪಹರಣಕಾರರು 48 ಲಕ್ಷ ರೂಪಾಯಿ ಪಡೆದುಕೊಂಡು ಅವರನ್ನು ಬಿಡುಗಡೆ ಮಾಡಿರುವರು. ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿರುವಂತಹ ಎಸ್ ಯುವಿಯನ್ನು ಪೊಲೀಸರು ವಶಪಡಿಸಿಕೊಂಡಿರುವರು.
ನ.25ರಂದು ಕೋಲಾರದ ಫಾರ್ಮ್ ಹೌಸ್ ನಲ್ಲಿ ಇದ್ದ ವೇಳೆ ತನ್ನನ್ನು ಅಪಹರಿಸಲಾಗಿತ್ತು. ಅಪಹರಣಕಾರರು ತನ್ನನ್ನು ಹಾಗೂ ಚಾಲಕನಿಗೆ ಹಿಂಸೆ ನೀಡಿದರು. ನ.26ರಂದು 48 ಲಕ್ಷ ರೂಪಾಯಿ ತರಿಸಿಕೊಂಡೆ ಎಂದು ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ವರ್ತೂರು ಪ್ರಕಾಶ್ ತಿಳಿಸಿದರು.
ನ.26ರಂದು ಚಾಲಕ ಸುನೀಲ್ ಗೆ ತುಂಬಾ ಹಿಂಸೆ ನೀಡಲಾಯಿತು. ಆದರೆ ಆತ ಹೇಗಾದರೂ ಮಾಡಿ ಪಾರಾದ. ನ.27ರಂದು ಅವರು ನನ್ನನ್ನು ಪೊಲೀಸರ ಭೀತಿಯಿಂದ ಹೊಸಕೋಟೆ ಬಳಿ ಬಿಡುಗಡೆ ಮಾಡಿದರು. ಕೆ.ಆರ್. ಪುರಂಗೆ ಬಂದು ಅಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ನನ್ನ ಚಾಲಕ ಕೋಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರ್ತೂರು ದೂರಿನಲ್ಲಿ ಹೇಳಿರುವರು.
ವರ್ತೂರು ಪ್ರಕಾಶ್ ಅವರು ಮೂರು ದಿನ ಕಳೆದ ಬಳಿಕ ಪೊಲೀಸರಿಗೆ ದೂರು ನೀಡಿರುವುದು ಅಚ್ಚರಿ ಮೂಡಿಸಿದೆ. ವರ್ತೂರು ಅವರು ರಿಯಲ್ ಎಸ್ಟೇಟ್ ವ್ಯಾಪಾರ ನಡೆಸುತ್ತಿದ್ದು, ಇದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿರುವರು.