ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರುದ್ಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಶನಿವಾರ ಆರಂಭಗೊಂಡಿದ್ದು, ಹಲವೆಡೆ ಬಿಎಂಟಿಸಿ ಬಸ್’ಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲೇಬೇಕು, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಅನೇಕ ಕನ್ನಡಪರ ಸಂಘಟನೆಗಳು ರಸ್ತೆಗೆ ಇಳಿದಿವೆ.
ಬೆಂಗಳೂರಿನ ಕೆಆರ್.ಪುರಂನ ಪೈ ಲೈಔಟ್ ನಲ್ಲಿ ಬಿಎಂಟಿಸಿ ಬಸ್’ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ. ಹೊಸೂರು ರಸ್ತೆಯ ಹಳೇ ಚಂದಾಪುರ ಬಳಿ ಬಿಎಂಟಿಸಿ ಬಸ್ ಮೇಲೂ ಕಲ್ಲೂ ತೂರಾಟ ನಡೆದಿರುವುದಾಗಿ ವರದಿಗಳು ತಿಳಿಸಿವೆ.
ನಗರದ ಟೌನ್ ಹಾಲ್ ಬಳಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದಗಳು ನಡೆಯುತ್ತಿದ್ದು, ಈ ವೇಳೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರ್ನಾಟಕ ಬಂದ್’ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಮಂಗಳೂರಿನಲ್ಲಿ ಬಂದ್’ಗೆ ಯಾವುದೇ ರೀತಿಯ ಬಿಸಿ ತಟ್ಟಿಲ್ಲ.