ಬೆಂಗಳೂರು: ರೈತರ ಕಾಯ್ದೆ ತಿದ್ದುಪಡಿಯಿಂದ ಆಗುವ ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ ಯಾಗುವಂತೆ ತಿಳಿಹೇಳಲು ಪ್ರವಾಸ ಕೈಗೊಳ್ಳುತ್ತಿದ್ದೇವೆ. ಅಧಿವೇಶನ ಮುಗಿದ ತಕ್ಷಣವೇ ಪ್ರವಾಸ ಪ್ರಾರಂಭ ಮಾಡಲಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಪಶುಸಂಗೋಪನೆ, ಸಹಕಾರಿ, ಕಂದಾಯ ಸಚಿವರು ಸೇರಿದಂತೆ ಹಲವು ಸಚಿವರು ಇದರಲ್ಲಿ ಭಾಗವಹಿಸಲಿದ್ದಾರೆ. ರೈತರು ಬಾರುಕೋಲು ಹಿಡಿದು ಚಳುವಳಿ ಮಾಡುವಂತಹದ್ದೇನಾಗಿಲ್ಲ. ದೇಶ ಹಾಗೂ ರಾಜ್ಯದ ರೈತರ ಅನುಕೂಲಕ್ಕಾಗಿಯೇ ಕಾಯಿದೆ ತರಲಾಗಿದೆ. ಇದನ್ನು ರೈತರಿಗೆ ಅರ್ಥ ಮಾಡಿಸುವ ಜವಾಬ್ದಾರಿ ಈಗ ನಮ್ಮದಾಗಿದೆ ಆ ಕೆಲಸವನ್ನು ಖುದ್ದಾಗಿದ್ದು ನಾವೇ ಹೋಗಿ ಮಾಡಬೇಕಾದ ಸಂದರ್ಭ ಬಂದಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಸಚಿವ ಪಟೇಲ್ ಹೇಳಿದರು.
ಎಪಿಎಂಸಿ ಕಾಯ್ದೆ ಬಗ್ಗೆ ಮಾತನಾಡಿದ ಅವರು, “ಈ ಹಿಂದೆ ಕಾಂಗ್ರೆಸ್ ನವರೇ ಎಪಿಎಂಸಿ ಕಾಯ್ದೆಯನ್ನು ರದ್ದುಮಾಡಿ ಮುಕ್ತ ಮಾರುಕಟ್ಟೆ ಮಾಡುವ ಬಗ್ಗೆ ಹಲವಾರು ಬಾರಿ ಭರವಸೆ ನೀಡಿತ್ತು. ಆ ಕೆಲಸವನ್ನು ಇಂದು ಬಿಜೆಪಿ ಸರಕಾರ ಮಾಡಿದೆ. ಅದಕ್ಕೆ ಅವರು ಸಂತೋಷದಿಂದ ಬೆಂಬಲಿಸಬೇಕೆ ಹೊರತು ವಿರೋಧಿಸುವುದಲ್ಲ. ಹೂವುಹಣ್ಣು ತರಕಾರಿಗಳನ್ನು ಎಪಿಎಂಸಿಯಿಂದ ಹೊರಗಿಡಬೇಕು. ಇದರಿಂದ ರೈತರ ಶೋಷಣೆಯಾಗುತ್ತಿದೆ ಎಂದಿದ್ದರು. ರೈತರು ಬುದ್ಧಿವಂತರಿದ್ದಾರೆ. ಅವರಿಗೆ ಸರಿತಪ್ಪುಗಳ ಬಗ್ಗೆ ಅರಿವಿದೆ. ತಾವು ನಡೆಸಿದ ಪ್ರವಾಸದಲ್ಲಿ ಎಲ್ಲಿಯೂ ರೈತರೂ ಈ ಕಾಯಿದೆಗಳನ್ನು ವಿರೋಧಿಸಿಲ್ಲ .ವಿನಾಕಾರಣ ರಾಜಕೀಯಕ್ಕಾಗಿ ಕಾಂಗ್ರೆಸ್ ಸುಮ್ಮನೆ ಆರೋಪಿಸುವುದು ಸರಿಯಲ್ಲ. ಇನ್ನು ಈ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ರೈತರ ಬಗ್ಗೆ ಹಾಗೂ ಅವರ ಕಷ್ಟಗಳ ಬಗ್ಗೆ ಕೊಂಚವೂ ಅರಿವಿಲ್ಲ. ಎಂದು ಹೊಲಗದ್ದೆಗಳಲ್ಲಿ ಕೆಲಸ ಮಾಡಿದವರಲ್ಲ. ಇಂಥವರ ಮಾತಿಗೆ ಪ್ರೇರೇಪಿತರಾಗಿ ಪ್ರತಿಭಟನೆ ಮಾಡುವುದು ವ್ಯರ್ಥವೇ ಸರಿ ಎಂದರು.
ವಿಧಾನಸಭೆ ಅಧಿವೇಶನ ನಡೆಯುವಾಗ ಇಂತಹ ಪ್ರತಿಭಟನೆ ಸಹಜ. ಇದರಿಂದ ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಇದೆಯೇ ಹೊರತು ಕಾಯ್ದೆಯನ್ನು ತಿದ್ದುಪಡಿ ಮಾಡುವ ಯಾವುದೇ ಮಾತು ಇಲ್ಲ. ಈ ವಿಷಯವಾಗಿ ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರಕಾರ ಸ್ಪಷ್ಟ ಪ್ರತಿಕ್ರಿಯೆ ನೀಡಿದೆ ಹಾಗೂ ಅದರಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದರು.