ಬೆಂಗಳೂರು: ಕೆಲವು ದಿನಗಳಿಂದ ವಾದ-ವಿವಾದಗಳಿಗೆ ಗುರಿಯಾಗಿದ್ದ ಗೋಹತ್ಯೆ ನಿಷೇಧ ಮಸೂದೆ ಜಾರಿಗೊಂಡಿದೆ. ರಾಜ್ಯಾದ್ಯಂತ ಈ ಮಸೂದೆಯ ನಿಯಮಗಳು ಅನ್ವಯವಾಗಲಿದ್ದು, ಗೋ ಹತ್ಯೆ ಮಾಡಿದವರಿಗೆ ಏಳು ವರ್ಷ ಜೈಲು ಮತ್ತು ಗರಿಷ್ಠ 10 ಲಕ್ಷದವರೆಗೆ ದಂಡ ವಿಧಿಸಲಾಗುವುದು ಹೇಳಲಾಗಿದೆ.
ಬುಧವಾರ ವಿಧಾನಸಭಾ ಸಭೆಯಲ್ಲಿ ಪಶುಸಂಗೋಪನೆ ಸಚಿವ ಪ್ರಭು ವಚನಗಳು ಚವ್ಹಾಣ್ ಮಸೂದೆಯನ್ನು ಮಂಡಿಸಿದ್ದು ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ಮೂಡಿಬಂದಿತ್ತು. ಕಾಂಗ್ರೆಸ್ ಸದಸ್ಯರು ಮಸೂದೆಯನ್ನು ಒಪ್ಪುವುದಿಲ್ಲವೆಂದು ಸಭಾತ್ಯಾಗ ಮಾಡಿದರು. ಆದರೂ ಪಟ್ಟು ಬಿಡದ ಬಿಜೆಪಿ ಮಸೂದೆಯನ್ನು ಜಾರಿಗೊಳಿಸಿದರು.
ಮಸೂದೆ ಒಳಗೊಂಡಿರುವ ಪ್ರಮುಖ ಅಂಶಗಳು:
* ಗೋಹತ್ಯೆ ಮಾಡಿದರೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ.
*ಒಂದು ಜಾನುವಾರು ಹತ್ಯೆ ಮಾಡಿದರೆ ₹50 ಸಾವಿರದಿಂದ ₹5 ಲಕ್ಷದವರೆಗೆ ದಂಡ.
* ಎರಡು ಅಥವಾ ಹೆಚ್ಚಿನ ಅಪರಾಧಕ್ಕೆ ₹1 ಲಕ್ಷದಿಂದ ₹10 ಲಕ್ಷ ದಂಡ ಮತ್ತು 7 ವರ್ಷ ಕಾರಾಗೃಹ ವಾಸ.
*ಜಾನುವಾರು ವ್ಯಾಪ್ತಿಯಲ್ಲಿ ಹಸು,ಕರು, ಎಮ್ಮೆ, ಎತ್ತು ಸೇರಿವೆ. 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳು ಒಳಗೊಂಡಿವೆ.
* 13 ವರ್ಷಕ್ಕೆ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಸೂಕ್ತ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಬಹುದು. ಇದಕ್ಕೆ ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಕಡ್ಡಾಯ.
* ಗೋಹತ್ಯೆಯ ಉದ್ದೇಶದಿಂದ ಹೊರ ರಾಜ್ಯಗಳಿಗೆ ಸಾಗಣೆ ನಿಷೇಧ.
* ವಶಕ್ಕೆ ತೆಗೆದುಕೊಂಡ ಹಸುಗಳನ್ನು ಹರಾಜು ಹಾಕಬಹುದು. ಸೆಕ್ಷನ್ 19 ರ ಪ್ರಕಾರ ವಶಕ್ಕೆ ಪಡೆದ ಹಸುಗಳನ್ನು ಆರೋಪಿಗಳಿಗೆ ವಾಪಸ್ ಮಾಡುವಂತಿಲ್ಲ.
*ಗೋ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ.
* ಗೋ ರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ
ಬಿಜೆಪಿ ಶಾಸಕರು ಮತ್ತು ಸಚಿವರು ಮಸೂದೆ ಅಂಗೀಕಾರವಾಗುತ್ತಿದ್ದ ಹಾಗೆ ಕೇಸರಿ ಶಾಲುಗಳನ್ನು ಹೊದ್ದು ಗೋ ಮಾತೆಗೆ ಜೈ’, ‘ಜೈಶ್ರೀರಾಮ್’ ಇತ್ಯಾದಿ ಘೋಷಣೆಗಳನ್ನು ಉದ್ಗರಿಸಿದರು. ನಂತರ ಸಚಿವ ಪ್ರಭು ಚವ್ಹಾಣ್ ಅವರು ವಿಧಾನಸೌಧದ ಪೂರ್ವ ದ್ವಾರದಲ್ಲಿ ಗೋ ಪೂಜೆ ಮಾಡಿದರು.