ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ನಡೆಯುತ್ತಿದ್ದ ಮುಷ್ಕರ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಹಾಗಾಗಿ ಶುಕ್ರವಾರ ರಾಜ್ಯದ ಬಹುತೇಕ ಕಡೆ ಸಂಚಾರ ವ್ಯವಸ್ಥೆ ಕೂಡಾ ಅಸ್ತವ್ಯಸ್ತಗೊಂಡಿತು.
ಬೇಡಿಕೆ ಈಡೇರಿಸುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಸಾರಿಗೆ ನೌಕರರು ಪಟ್ಟು ಹಿಡಿದು ಕೂತಿದ್ದು ಇಂದು ಕೂಡ ಇದರ ಬಿಸಿ ಸರ್ಕಾರ ಮತ್ತು ಜನಸಾಮಾನ್ಯರಿಗೆ ತಟ್ಟುವ ಸಾಧ್ಯತೆ ಇದೆ.
ನೆರೆ ರಾಜ್ಯಗಳಂತೆ ರಾಜ್ಯದ ಸಾರಿಗೆ ನಿಗಮಗಳ ನೌಕರರನ್ನೂ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ ನೌಕರರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.
ಗುರುವಾರ ವಿಧಾನಸೌಧಕ್ಕೆ ನಡೆಸಿದ ಕಾಲ್ನಡಿಗೆ ಜಾಥಾದಲ್ಲಿ ಸಾರಿಗೆ ನೌಕರರ ಮುಖಂಡರನ್ನು ಬಂಧಿಸಿದ್ದು ಹೋರಾಟದ ದಿಕ್ಕನ್ನೇ ಬದಲಿಸಿತು. ಇದರಿಂದ ನೌಕರರ ಹೋರಾಟದ ತೀವ್ರತೆ ಮತ್ತಷ್ಟು ಹೆಚ್ಚಿಸಿತು.
ಮುಖಂಡರ ಬಂಧನ ಸುದ್ದಿ ನೌಕರರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಆಕ್ರೋಶಕ್ಕೆ ಕಾರಣವಾಗಿತ್ತು. ಶುಕ್ರವಾರ ಬೆಳಿಗ್ಗೆ ಡಿಪೋಗಳಿಗೆ ಬಂದ ನೌಕರರು ಬಸ್ ಹೊರಕ್ಕೆ ತೆಗೆಯದೆ ಮುಷ್ಕರ ಆರಂಭಿಸಿದರು. ಬಸ್ ಚಾಲನೆ ಮಾಡಲು ಹೊರಟ ಕೆಲ ನೌಕರರನ್ನೂ ತರಾಟೆಗೆ ತೆಗೆದುಕೊಂಡು ಬಸ್ ಸಂಚಾರವನ್ನ ನಿಲ್ಲಿಸಿದ್ದರು.
ಸಾರಿಗೆ ನೌಕರರ ದಿಢೀರ್ ಮುಷ್ಕರವು ಜನ ಸಾಮಾನ್ಯರಿಗೆ ತಿಳಿದಿರಲಿಲ್ಲ ಹಾಗಾಗಿ ಲಕ್ಷಾಂತರ ಪ್ರಯಾಣಿಕರು ರಸ್ತೆಯಲ್ಲಿ ಪರದಾಡುವಂತಾಯಿತು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳಿಗಾಗಿ ಜನರು ಗಂಟೆಗಟ್ಟಲೆ ಕಾದು ಕುಳಿತಿದ್ದು ಕೊನೆಗೆ ವಿಧಿ ಇಲ್ಲದೆ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳನ್ನು ಏರಿ ಹೋಗಬೇಕಾಯಿತು.
ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಆಗಿರುವ ಲಕ್ಷ್ಮಣ ಸವದಿ ಅವರು ಸಾಕಷ್ಟು ಸಭೆ ನಡೆಸಿದರೂ ಇದಕ್ಕೆ ಸೂಕ್ತ ಪರಿಹಾರ ಸಿಗಲಿಲ್ಲ. ಹೀಗಾಗಿ, ಇಂದು ಕೂಡಾ ಮುಷ್ಕರ ಮುಂದುವರಿಯುವ ಎಲ್ಲಾ ಸಾಧ್ಯತೆ ಇದೆ.
ನೌಕರರನ್ನು ಕರೆದು ಮಾತುಕತೆ ನಡೆಸುವ ಬದಲು ಎಐಟಿಯುಸಿ, ಸಿಐಟಿಯು, ಬಿಎಂಎಸ್ ಮತ್ತು ಮಹಾಮಂಡಲದ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿ ಮುಷ್ಕರ ಕೈಬಿಡುವಂತೆ ಮನವೊಲಿಸಲು ಯತ್ನಿಸಿದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡುವ ತನಕ ಹೋರಾಟ ಮುಂದುವರಿಯಲಿದೆ’ ಎಂದು ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ರಾಜ್ಯದಲ್ಲಿ ಮಂಗಳೂರು ವಿಭಾಗ ಹೊರತುಪಡಿಸಿ ಬಹುತೇಕ ಕಡೆ ಸಾರಿಗೆ ನಿಗಮಗಳ ಮುಷ್ಕರಕ್ಕೆ ವ್ಯಾಪಕ ಬೆಂಬಲ ನೀಡಿವೆ. ಪ್ರಮುಖವಾಗಿ ಕಲಬುರ್ಗಿ, ಕೋಲಾರ, ಮೈಸೂರು, ಹುಬ್ಬಳ್ಳಿ ಭಾಗದಲ್ಲಿ ಸಾರಿಗೆ ನಿಗಮಗಳ ಬಸ್ಗಳ ಮೇಲೆ ಕಲ್ಲೆಸೆಯಲಾಗಿದ್ದು ಮೈಸೂರಿನಲ್ಲಿ ಚಾಲಕರೊಬ್ಬರಿಗೆ ಗಾಯಗಳಾಗಿವೆ.
ಬಿಎಂಟಿಸಿಯ ಶೇಕಡ 70ರಷ್ಟು ಮತ್ತು ಕೆಎಸ್ಆರ್ಟಿಸಿಯ ಶೇ 60ರಷ್ಟು ಬಸ್ಗಳ ಸಂಚಾರ ರದ್ದುಗೊಂಡಿತ್ತು. ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಶೇ 55ರಷ್ಟು ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ ಶೇ 40ರಷ್ಟು ಬಸ್ಗಳ ಸಂಚಾರವನ್ನ ರದ್ದುಗೊಳಿಸಿ ಪ್ರತಿಭಟಿಸಿತ್ತು.
ಬಿಎಂಟಿಸಿ ಎಚ್ಚರಿಕೆ:
ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಎಸ್ಮಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ನೌಕರರಿಗೆ ಎಚ್ಚರಿಕೆ ನೀಡಿದೆ.
ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವುದು ಅಗತ್ಯ ಸೇವೆಗಳ ಕಾಯ್ದೆ ವ್ಯಾಪ್ತಿಯಲ್ಲಿದೆ. ವಾರದ ರಜೆ ಅಥವಾ ದೀರ್ಘಕಾಲದ ರಜೆಯಲ್ಲಿ ಇರುವ ನೌಕರರನ್ನು ಹೊರತುಪಡಿಸಿ ಉಳಿದವರು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಅವರ ವಿರುದ್ಧ ಎಸ್ಮಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ.
‘ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿಯವರ ಜತೆ ಸಭೆ ಆಯೋಜಿಸಲಾಗುವುದು. ನೌಕರರ ಎಲ್ಲ ಬೇಡಿಕೆಗಳನ್ನೂ ಸರ್ಕಾರ ಪರಿಗಣಿಸಲಿದೆ ಹಾಗಾಗಿ ಶೀಘ್ರವೇ ಮುಷ್ಕರವನ್ನು ಕೈಬಿಡಲು ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.