ಬೆಂಗಳೂರು: ಕೋವಿಲ್ 19ರ ಕರಣದಿಂದ ಸ್ಥಗಿತಗೊಂಡಿದ್ದ ಮಕ್ಕಳ ವಿದ್ಯಾಭ್ಯಾಸವನ್ನು ಪರಿಷ್ಕೃತ ರೂಪದಲ್ಲಿ ಪ್ರಾರಂಭ ಗೊಳಿಸುವ ಬಗ್ಗೆ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್.
ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಪರಿಸ್ಕೃತ ರೂಪದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಕಳೆದ ಆಗಸ್ಟ್ 8 ರಿಂದ ಆರಂಭಿಸಲಾಗಿದ್ದ ವಿದ್ಯಾಗಮವನ್ನು ಅಕ್ಟೋಬರ್ 10 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅದನ್ನು ಮತ್ತೆ ಪ್ರಾರಂಭಿಸುವ ಬಗ್ಗೆ ಯೋಜನೆಗಳು ಸಿದ್ಧವಾಗಿವೆ ಎಂದು ಹೇಳಿದರು.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಕಾರ್ಯಕ್ರಮವು ನಡೆಯಲು ಅನುವು ಮಾಡಿ ಕೊಡಲಾಗಿದೆ. ಪ್ರಸ್ತುತ ಇರುವ ಆನ್ಲೈನ್, ಚಂದನಾ ವಾಹಿನಿಯ ಪಾಠಗಳು ಎಂದಿನಂತೆ ಮುಂದುವರೆಯಲಿವೆ. ಅರ್ಧ ದಿನ ಮಕ್ಕಳು ಮಾಸ್ಕ್ ಧರಿಸಿ ಶಾಲಾವರಣಕ್ಕೆ ಬಂದು ಸಾಮಾಜಿಕ ಅಂತರದೊಂದಿಗೆ ಕುಳಿತು ಪಾಠ ಕಲಿಯಬಹುದಾಗಿದೆ. ಆದರೆ ಅದಕ್ಕೆ ಪೋಷಕರ ಅನುಮತಿ ಪತ್ರ ಕಡ್ಡಾಯ ವಾಗಿದ್ದು, ಪ್ರತಿ ಶಾಲೆಯಲ್ಲಿ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಮತ್ತು ಕೋವಿಡ್-19ರ ಲಕ್ಷಣಗಳಿರುವ ವಿದ್ಯಾರ್ಥಿಗಳು ಬರುವಂತಿಲ್ಲ ಎಂದು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ವಿದ್ಯಾಗಮದ ಅನುಷ್ಠಾನಾಧಿಕಾರಿಗಳಾಗಿದ್ದಾರೆ. ವಿದ್ಯಾಗಮ ತರಗತಿಗಳು ಪಾಳಿಗಳಲ್ಲಿ ಅಂದರೆ ಬೆಳಗ್ಗೆ 45 ನಿಮಿಷದ 3 ತರಗತಿಗಳು ಮತ್ತು ಮಧ್ಯಾಹ್ನದ ಪಾಳಿಯಲ್ಲಿ 3 ತರಗತಿಗಳನ್ನು ನಡೆಸಲಾಗುತ್ತದೆ. ಒಂದು ದಿನಕ್ಕೆ 7ರಿಂದ 8 ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ಬರಲು ಸೂಚಿಸಲಾಗುತ್ತಿದೆ ಎಂದು ಸಚಿವರು ವಿವರಗಳನ್ನು ನೀಡಿದರು.