ಬೆಂಗಳೂರು: ಡಿಸೆಂಬರ್ 15ರಂದು ಸದನದಲ್ಲಿ ಕರ್ತವ್ಯಲೋಪ ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪದ ಮೇಲೆ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಶೋಕಾಸ್ ನೋಟಿಸ್ ಹೊರಡಿಸಿದ್ದಾರೆ.
ಡಿ.15ರ ಅಧಿವೇಶನ ದಂಡು ಕೋರಂ ಬೆಲ್ ಮುಗಿಯುವ ಮುನ್ನವೇ ಉಪ ಸಭಾಪತಿ ಪೀಠ ಏರಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಅವರಿಗೆ ನೋಟಿಸ್ ನೀಡಿದ ಸಭಾಪತಿ, ಸ್ಪಷ್ಟ ದಾಖಲೆಯೊಂದಿಗೆ 48 ಗಂಟೆಗಳೊಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.
‘ನಿಮ್ಮ ವರ್ತನೆಯು ವಿಧಾನಮಂಡಲದ ನೌಕರನಿಗೆ ಸರಿಯದದಲ್ಲ. ನಿಯಮಬಾಹಿರ, ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಮತ್ತು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅಧಿಕಾರ ವ್ಯಾಪ್ತಿ ಮೀರಿರುವ ನಿಮ್ಮ ವಿರುದ್ಧ ಕರ್ನಾಟಕ ನಾಗರಿ ಕಸೇವಾ ನಿಯಮಾವಳಿ ಅಡಿಯಲ್ಲಿ ಏಕೆ ಕ್ರಮ ಜರುಗಿಸಬಾರದು?’ ಎಂದು ನೋಟಿಸ್ನಲ್ಲಿ ಪ್ರಶ್ನಿಸಿದ್ದಾರೆ.
ಡಿ.15ರಂದು ನಾನು ಸದನಕ್ಕೆ ಬರದಂತೆ ತಡೆದಿರುವುದು ಮತ್ತು ಕಲಾಪಗಳ ನಿಯಮಾವಳಿಗಳನ್ನು ಗಾಳಿಗೆ ತೂರಿ ವ್ಯತಿರಿಕ್ತವಾಗಿ ವರ್ತಿಸಿರುವ ಘಟನೆ ಕುರಿತು ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸಾರ್ವಜನಿಕ ಚರ್ಚೆ, ಟೀಕೆ, ಪತ್ರಿಕಾ ಸಂಪಾದಕೀಯಗಳು, ಸದನದ ಹಿಂದಿನ ಸಭಾಪತಿಯವರ ಅಭಿಪ್ರಾಯಗಳಿಗೆ ಸದನದ ಮುಖ್ಯಸ್ಥನಾದ ನಾನು ನೈಜ ಸಂಗತಿಗಳ ಆಧಾರದಲ್ಲಿ ವಿವರಣೆ ನೀಡಬೇಕಿದೆ. ಈ ಘಟನೆಯಿಂದ ಶತಮಾನದ ಇತಿಹಾಸವುಳ್ಳ ವಿಧಾನ ಪರಿಷತ್ತಿನ ಗೌರವ, ಘನತೆ ಮತ್ತು ಸಂಪ್ರದಾಯಕ್ಕೆ ಧಕ್ಕೆಯಾಗಿದೆ’ ಎಂದು ಸಭಾಪತಿ ಪತ್ರದಲ್ಲಿ ಹೇಳಿದ್ದಾರೆ.