ಬೆಂಗಳೂರು : ಕೊರೊನಾ ದಿಂದಾಗಿ ಆನ್ಲೈನ್ ಕ್ಲಾಸ್ ಗಳು ಎಲ್ಲೆಡೆ ಪ್ರಾರಂಭವಾಗಿದೆ. ಆದರೆ ಅದರಿಂದಾಗುವ ಅನಾಹುತಗಳ ಬಗ್ಗೆ ಈಗಾಗಲೇ ಹಲವಾರು ವರದಿಗಳೂ ಬಂದಿತ್ತು ಅಂತಹದೇ ಒಂದು ಘಟನೆ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
13 ವರ್ಷದ ಬಾಲಕಿಯೊಬ್ಬಳು ಆನ್ ಲೈನ್ ಕ್ಲಾಸ್ ಗಾಗಿ ಕೊಟ್ಟಿದ್ದ ಮೊಬೈಲ್ ನಲ್ಲಿ ಇನ್ಸ್ಟಾಗ್ರಾಂ ಖಾತೆ ಉಪಯೋಗಿಸಲು ಶುರು ಮಾಡಿದ್ದಳು. ಆ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಳುಹಿಸಿದ ರಿಕ್ವೆಸ್ಟ್ ನನ್ನು ಒಪ್ಪಿ ಚಾಟ್ ಮಾಡಲು ಪ್ರಾರಂಭಿಸಿದ್ದರು. ಕೆಲ ದಿನಗಳ ನಂತರ ಆತ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಬಾಲಕಿಗೆ ರವಾನಿಸಿ ವಿಕೃತ ಮೆರೆಯಲು ಶುರು ಮಾಡಿದ್ದ. ಅಷ್ಟೇ ಅಲ್ಲದೆ ಅದೇ ರೀತಿಯ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಆಕೆಗೂ ಕಳಿಸುವಂತೆ ಒತ್ತಾಯಿಸಿದ್ದ.
ಹೆದರಿದ ಬಾಲಕಿ ಈ ಬಗ್ಗೆ ತನ್ನ ಪೋಷಕರಿಗೆ ತಿಳಿಸಿ ಅವರು ಅಕೌಂಟ್ ಬ್ಲಾಕ್ ಮಾಡಿದರು. ಅದಾದ ನಂತರವೂ ಆ ವ್ಯಕ್ತಿ ಮತ್ತೊಂದು ನಕಲಿ ಖಾತೆಯನ್ನು ತೆರೆದು ಆ ಮೂಲಕ ಮತ್ತದೇ ಚಾಳಿಯನ್ನು ಮುಂದುವರಿಸಿದ. ಇದರಿಂದ ಬೇಸತ್ತ ಪೋಷಕರು ಈ ಬಗ್ಗೆ ಬೆಂಗಳೂರು ದಕ್ಷಿಣ ವಲಯದ ಪೊಲೀಸ್ ಠಾಣೆಗೆ ಮೇಲ್ ಮೂಲಕ ವಿಷಯ ತಿಳಿಸಿ ಪ್ರಕರಣವನ್ನು ದಾಖಲಿಸಿದ್ದಾರೆ. ದೂರನ್ನು ಆಧರಿಸಿ ದಕ್ಷಿಣ ವಿಭಾಗದ ಸಿಇಎನ್ ಠಾಣೆ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.