ಬೆಂಗಳೂರು : ದೇಶಕ್ಕೆ ಮಾದರಿಯಾಗುವಂತ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರ ಬದಲಾವಣೆಯನ್ನು ರಾಜ್ಯದಲ್ಲಿ ಅಳವಡಿಸುವ ಯೋಜನೆಯನ್ನು ಮಾಡಲಾಗುತ್ತದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಯಂಬುಲೆನ್ಸ್, ಓರ್ವ ವೈದ್ಯರು ಇರುವ ಜಾಗದಲ್ಲಿ ಅವರೊಂದಿಗೆ ಜೊತೆಗೆ ನಾಲ್ಕು ವೈದ್ಯರನ್ನು ನೇಮಕ ಹಾಗೂ 12 ರಿಂದ 20 ಹಾಸಿಗೆಗೆಗಳನ್ನು ಹೆಚ್ಚು ಮಾಡಲಾಗುತ್ತದೆ. ಈ ಮೂಲಕ ಆಯಾ ಜಿಲ್ಲೆಯಲ್ಲಿಯೇ ಜನರಿಗೆ ಆರೋಗ್ಯ ಸೇವೆ ಒದಗಿಸುವಂತ ಕ್ರಾಂತಿಕಾರಕ ಬದಲಾವಣೆ ತರಲಾಗುತ್ತಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, “ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಬಗ್ಗೆ ಚರ್ಚಿಸಿದರು. ಅವರು ಇಡೀ ಭಾರತದಲ್ಲೇ ಕರ್ನಾಟಕದಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿರಬೇಕು ಎಂಬುದಾಗಿ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಇಡೀ ದೇಶಕ್ಕೆ ಮಾದರಿಯಾಗುವಂತ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತರುವಂತೆ ಸೂಚಿಸಿದ್ದಾರೆ. ಇಂತಹ ಕನಸಿಗೆ ಸಕಾರಗೊಳಿಸುವಂತ ನಿಟ್ಟಿನಲ್ಲಿ ಪೂರಕವಾಗಿ ರಾಜ್ಯದಲ್ಲಿ ಇರುವಂತ 2,380 ಪ್ರಾಥಮಿಕ ಕೇಂದ್ರಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ” ಎಂದು ತಿಳಿಸಿದರು.
ಈಗ ಬರುತ್ತಿರುವ ಹೊಸ ವರ್ಷದಲ್ಲಿ, ಇದನ್ನು ಜಾರಿಗೊಳಿಸಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಕ್ರಾಂತಿಕಾರ ಬದಲಾವಣೆ ಆಗಲಿದೆ. ಮಾದರಿ ಪಿಹೆಚ್ ಸಿ ಬಗ್ಗೆಯೂ ಮಾಹಿತಿ ನೀಡಲಾಗಿದೆ. ವೈದ್ಯರು ಗ್ರಾಮೀಣ ಭಾಗಕ್ಕೆ ಸೇವೆಗೆ ಹೋಗುತ್ತಿರುವುದು ಕಾರಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಗುಣಮಟ್ಟದ ವಸತಿ ಸಮುಚ್ಥಯ ನಿರ್ಮಾಣ ಮಾಡಿ, ವೈದ್ಯರು, ನರ್ಸ್ ಗಳು, ಇತರೆ ಆರೋಗ್ಯ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ ಎಂದರು.