ಬೆಂಗಳೂರು: ರಾಜ್ಯಾದ್ಯಂತ ಡಿ.24ರಿಂದ 15 ದಿನಗಳ ಕಾಲ ನಂದಿನಿ ಉತ್ಸವ ನಡೆಯುತ್ತಿದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಾಡುತ್ತಿದೆ.
ಕಳೆದ ನಾಲ್ಕು ವರ್ಷದಿಂದ ಸತತವಾಗಿ ಕೆಎಂಎಫ್ ವರ್ಷದಲ್ಲಿ ಎರಡು ಭಾರಿ ನಂದಿನಿ ಸಿಹಿ ಉತ್ಸವ ಆಚರಣೆ ಮಾಡುತ್ತಿದ್ದು, ಈ ಭಾರಿ ಕೂಡ ಡಿ. 24ರಿಂದ 2021ರ ಜನವರಿ 7 ವರಿಗೆ ರಾಜ್ಯಾದ್ಯಂತ ನಂದಿನಿ ಉತ್ಸವ ಆಯೋಜಿಸಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಮಾಡುವ ಮೂಲಕ ತನ್ನ ಗ್ರಾಹಕರಿಗೆ ಬಹುದೊಡ್ಡ ಕೊಡುಗೆ ನೀಡಲು ಮುಂದಾಗಿದೆ.
ಡಿ.24ರಂದು ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿ ಬಳಿ ಇರುವ ನಂದಿನಿ ಪಾರ್ಲರ್ ನಲ್ಲಿ ನಂದಿನಿ ಸಿಹಿ ಉತ್ಸವ ಹಾಗೂ ನಂದಿನಿ ಚೀಸ್ ಫೆಸ್ಟ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಚಾಲನೆ ನೀಡಿದರು. ಈ ವೇಳೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್, ಶಾಸಕ ನಂಜೇಗೌಡ ಭಾಗಿಯಾಗಿದ್ದರು.
ಕಳೆದ 40 ವರ್ಷಗಳಿಂದ ಗ್ರಾಹಕರಿಗೆ ಶುದ್ಧ ಮತ್ತು ರುಚಿಯಾದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಗ್ರಾಹಕರಿಗೆ ಪೂರೈಸುತ್ತಿದ್ದು, ಇವರಿಗೂ ಕೆಎಂಎಫ್ ಹಾಲು ಉತ್ಪಾದನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಹೇಳಲಾಗುತ್ತದೆ.
ನಂದಿನಿ ಸಿಹಿ ಉತ್ಸವ ಹಿನ್ನೆಲೆಯಲ್ಲಿ ಗ್ರಾಹಕರನ್ನ ನಂದಿನಿ ಉತ್ಪನ್ನಗಳತ್ತ ಆಕರ್ಷಿಸಲು ಕೆಎಂಎಫ್ನ ಎಲ್ಲ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.10ರ ರಿಯಾಯಿತಿ ನೀಡುತ್ತಿದೆ. ಗ್ರಾಹಕರು ಸದುಪಯೋಗ ಪಡೆಸಿಕೊಳ್ಳಬಹುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.