ಬೆಂಗಳೂರು: ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳ ಲೆಟರ್ ವಾರ್ ಮುಂದುವರೆದಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿನ್ನೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹೆಸರಲ್ಲಿ ಪತ್ರ ಬಂದಿದ್ದು ಗೃಹ ಇಲಾಖೆ ಕಾರ್ಯದರ್ಶಿ ರೂಪಾ ಐಪಿಎಸ್ ಮೂಗು ತೂರಿಸಿದ್ದಾರೆಂದು ಉಲ್ಲೇಖಿಲಾಗಿದೆ. ಈ ಹಿನ್ನೆಲೆ ಇಂದು ಖುದ್ದು ತಮ್ಮ ಹಸ್ತಕ್ಷಾರ ಹಾಕಿ ಮುಖ್ಯ ಕಾರ್ಯದರ್ಶಿಗೆ ಐಜಿಪಿ ರೂಪಾ ಪತ್ರ ಬರೆದಿದ್ದಾರೆ. ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಅಪಾರ ಮುಖ್ಯ ಕಾರ್ಯದರ್ಶಿ ಗೃಹ ಇಲಾಖೆ, ಗೃಹ ಸಚಿವರ ಆಪ್ತರಿಗೆ ಪತ್ರ ರವಾನೆ ಮಾಡಿದ್ದಾರೆ.
ಸೇಫ್ ಸಿಟಿ ಫೈಲ್ ನನಗೆ ಅಧ್ಯಯನ ಮಾಡಲು ನೀಡಿದ್ದರು, ಆ ಫೈಲ್ನ್ನು ನಾನು ಓದಲಾಗಿ ಸರಿಯಾದ ಕ್ರಮ ಅನುಸರಿಸಿಲ್ಲವೆಂದು ಗಮನಕ್ಕೆ ಬಂತು. ಹಾಗಾಗಿ ನಾನು ಹೆಚ್ಚಿ ಮಾಹಿತಿಗಾಗಿ ಇ ಆಯಂಡ್ ವೈ ಕಂಪನಿ ಬಳಿ ಮಾಹಿತಿ ಕೇಳಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇತ್ತ ಸೇಫ್ ಸಿಟಿ ಯೋಜನೆಗೆ 1,067ಕೋಟಿ ಹಣ ಮೀಸಲಿಡಲಾಗಿದೆ. ಈ ಯೋಜನೆಯ ಟೆಂಡರ್ ಕರೆಯುವ ಮತ್ತು ಸ್ಕೂಟಿನಿ ಮಾಡುವ ಸಮಿತಿ ಅಧ್ಯಕ್ಷರಾಗಿರುವ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ನ್ಯಾಯಯುತವಾಗಿ ಟೆಂಡರ್ ಅನುಮೋದಿಸದೆ ಪಕ್ಷಪಾತ ಎಸಗಿದ್ದಾರೆ. ಯಾವುದೋ ಒಂದು ಕಂಪನಿಯ ಪರವಾಗಿ ಕೆಲಸ ಮಾಡಿದ್ದಾರೆ. ಸೇಫ್ ಸಿಟಿ ಟೆಂಡರ್ನಲ್ಲಿ ಪಕ್ಷಪಾತ ಎಸಗಿದ್ದಾರೆಂದು ಬಿಇಎಲ್ ಸಂಸ್ಥೆ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದೆ ಎನ್ನುವ ಮಾಹಿತಿ ಇದೆ.