ಬೆಂಗಳೂರು : ಬಡ್ಡಿ ಆಸೆ ತೋರಿಸಿದ ಕಂಪನಿಯೊಂದು ಗ್ರಾಹಕರಿಗೆ 300 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಪತ್ತೆಯಾಗಿದೆ.
ತಮಿಳುನಾಡು ಮೂಲದ ಎಂಜಿ ರಸ್ತೆಯ ಮಿತ್ತಲ್ ಟವರ್ ಬಳಿ ಇರುವ ವಿಶ್ವಪ್ರಿಯ ಫೈನಾನ್ಸಿಯಲ್ ಅಂಡ್ ಸೆಕ್ಯೂರಿಟಿ ಎಂಬ ಹೆಸರಿನ ಕಂಪನಿಯೊಂದು ಅಧಿಕ ಬಡ್ಡಿ ನೀಡುವಂತೆ ಭರವಸೆ ನೀಡಿ ಹೂಡಿಕೆದಾರರಿಗೆ ವಂಚನೆ ಎಸಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪಗಳ ಪ್ರಕಾರ ಶೇ.10.47 ರಂತೆ ಬಡ್ಡಿ ಕೊಡುವುದಾಗಿ ಗ್ರಾಹಕರನ್ನು ನಂಬಿಸಿರುವ ಕಂಪನಿ 300 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದು, ಇದೀಗ ಗ್ರಾಹಕರನ್ನು ವಂಚಿಸಿದೆ. ಎಲ್ಲ ಹಣವನ್ನು ಏಜೆಂಟ್ ಗಳ ಮೂಲಕ ಸಂಗ್ರಹ ಮಾಡಲಾಗಿದೆ.
ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಂಪನಿ ಮುಖ್ಯಸ್ಥ ಸುಬ್ರಮಣಿಯನ್, ನಾರಾಯಣನ್ ಹಾಗೂ ಕಂಪನಿ ಏಜೆಂಟ್ ಗಳಾದ ಪಿ ಸದಾನಂದ ರಾಜೇಂದ್ರ, ಅದಿಕೇಶವ ಎಂಬುವವರ ವಿರುದ್ಧ ತನಿಖೆ ಪ್ರಾರಂಭವಾಗಿದೆ. ಮುಖ್ಯವಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದರೊಂದಿಗೆ ಗ್ರಾಹಕರಿಗೆ ಠೇವಣಿ ಹಣ ನೀಡದೆ ವಂಚಿಸಿರುವ ಆರೋಪವು ಮಾಡಲಾಗಿದೆ.