ಬೆಂಗಳೂರು : ಮಣ್ಣು, ಕೀಟ ರೋಗ, ನೀರು ಪರೀಕ್ಷೆ ಸೇರಿದಂತೆ ಇನ್ನಿತರ ತಾಂತ್ರಿಕ ನೆರವನ್ನು ಕಾಲಕಾಲಕ್ಕೆ ಕೃಷಿಕರ ಮನೆ ಬಾಗಿಲಿಗೇ ತಲುಪಿಸುವ ಕೃಷಿ ಸಂಜೀವಿನಿ ಹೆಸರಿನ ಸಂಚಾರಿ ಕೃಷಿ ವಾಹನಗಳು ಸಿಎಂ ಬಿ.ಎಸ್. ಯಡಿಯೂರಪ್ಪ ನಾಳೆ ಲೋಕಾರ್ಪಣೆಗೊಳಿಸಲಿದ್ದಾರೆ.
ಜನವರಿ 7ರಂದು ಬೆಳಗ್ಗೆ ವಿಧಾನಸೌಧದ ಮುಂಭಾಗದಲ್ಲಿ ಈ ವಾಹನಗಳನ್ನು ರೈತರಿಗೆ ಸಮರ್ಪಿಸಲಿದ್ದು, ಚಿಕ್ಕ ಜಿಲ್ಲೆಗಳಿಗೆ 1 ಹಾಗೂ ದೊಡ್ಡ ಜಿಲ್ಲೆಗಳಿಗೆ 2ರಂತೆ ರಾಜ್ಯಾದ್ಯಂತ ಒಟ್ಟು 40 ಕೃಷಿ ಸಂಜೀವಿನಿ ವಾಹನಗಳು ರೈತರ ಸೇವೆಗೆ ಮುಕ್ತವಾಗಲಿವೆ ಎಂದು ಹೇಳಲಾಗಿದೆ.
ಈ ವಾಹನಗಳನ್ನು ಬಳಸಿಕೊಳ್ಳಲು ಸಹಾಯವಾಣಿ 155313 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬೇಕಾಗುತ್ತದೆ. ಇದರಿಂದ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಜೀವಿನಿ ವಾಹನಗಳ ವ್ಯವಸ್ಥೆಯನ್ನು ಮಾಡಿ ಕರೆ ನೀಡಿದ ರೈತರ ಮನೆ ಬಾಗಿಲಿಗೆ ಕಲಿಸುತ್ತದೆ. ಅಷ್ಟೇ ಅಲ್ಲದೆ ಸಹಾಯವಾಣಿ ಆರೋಗ್ಯ ಇಲಾಖೆಯ ಆಂಬುಲೆನ್ಸ್ ನಿರ್ವಹಣಾ ರೀತಿಯಲ್ಲಿ ಕೆಲಸ ಮಾಡಲಿದ್ದು, ಕರೆ ಮಾಡಿದ ರೈತರು ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಪಡೆಯಬಹುದಾಗಿದೆ.