ಬೆಂಗಳೂರು: ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಹಾಗೂ ಜೂನ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಶಿಕ್ಷಣ ಇಲಾಖೆಯು ಈ ತರಗತಿಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ದೃಷ್ಟಿಯಿಂದ ಬೋಧನೆ ಹಾಗೂ ಕಲಿಕೆಗಳ ವಿಷಯಾಂಶಗಳನ್ನು ಅಂತಿಮಗೊಳಿಸಿದೆ. ಅಷ್ಟೇ ಅಲ್ಲದೆ ಸದ್ಯದಲ್ಲೇ ವಿವರಗಳನ್ನು ಎಲ್ಲಾ ಶಾಲೆಗಳಿಗೂ ತಲುಪಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿಗೂ ಹೊರೆಯಾಗದ ರೀತಿಯಲ್ಲಿ ಕನಿಷ್ಟ ಕಲಿಕೆಗೆ ಬೋಧಿಸಬೇಕಿರುವ ಪಠ್ಯಗಳನ್ನು ಪರಿಗಣಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಒಂದರಿಂದ 9ನೇ ತರಗತಿ ಪಠ್ಯಗಳ ಕುರಿತು ಮಾತನಾಡಿದ ಅವರು, 9ನೇ ತರಗತಿಯ ವರೆಗಿನ ಪಠ್ಯಗಳಲ್ಲಿ ಯಾವುದೇ ಕಡಿತವಿಲ್ಲ, ಈ ಕುರಿತು ಪರ್ಯಾಯ ಶೈಕ್ಷಣಿಕ ವೇಳಾ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ತರಗತಿಗಳ ಸಂಬಂಧಪಟ್ಟಂತೆ ಪಟ್ಟೆ ಕಡಿತಗೊಳಿಸುವ ಪ್ರಸ್ತಾಪ ಈವರೆಗೂ ಇಲಾಖೆಯ ಮುಂದಿಲ್ಲ. ಆದರೆ ಈ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಮೌಲ್ಯಮಾಪನ ನಡೆಯುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಆಧಾರ ವಾಗುವಂತೆ ಸರಳ ಮೌಲ್ಯಮಾಪನ ಪ್ರಕ್ರಿಯೆ ಜಾರಿಗೊಳ್ಳುವುದು ಎಂದು ಶಿಕ್ಷಣ ಸಚಿವ ಸ್ಪಷ್ಟಪಡಿಸಿದರು.