ಬೆಂಗಳೂರು: ರಾಜಾಕಾಲುವೆಗಳನ್ನು ಅಗಲೀಕರಣಗೊಳಿಸಿ ಹೊಸ ಚರಂಡಿ ವ್ಯವಸ್ಥೆಯ ಜೊತೆಗೆ ಸಂಪರ್ಕ ಕಾಲುವೆಗಳನ್ನು ನಿರ್ಮಿಸಲು ಬೃಹತ್ ಯೋಜನೆಯನ್ನು ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಭಾರಿ ಮಳೆಯಿಂದ ಜಲಾವೃತವಾಗಿದ್ದ ಮಾನ್ಯತಾ ಟೆಕ್ ಪಾರ್ಕ್ ಗೆ ಇಂದು ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಜವಾಹರ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ಲ್ಯಾಬ್ ಗಳಿಗೆ ನೀರು ನುಗ್ಗಿ ಸ್ಯಾಂಪಲ್ ಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿವೆ. ನಮ್ಮ ಬದುಕು, ಸಮಾಜ ವೈಜ್ಞಾನಿಕ ಸಂಶೋಧನೆಯಿಂದಲೇ ಬೆಳೆದಿರುವುದು.
ಇದು ಭವಿಷ್ಯವನ್ನು ನಿರ್ಮಾಣಮಾಡುವ ಪ್ರಮುಖ ಕೇಂದ್ರ. ಈ ಸಂಸ್ಥೆಯನ್ನು ಯಾವುದೇ ಸಂದರ್ಭದಲ್ಲಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ವಿಶೇಷ ಕಾಳಜಿ ತೆಗೆದುಕೊಂಡು ಇಲ್ಲಿನ ಸಂಶೋಧನಾ ಲ್ಯಾಬ್, ಗ್ರಂಥಾಲಯಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಸಂಸ್ಥೆಯ ಸಹಕಾರವನ್ನೂ ಕೋರಲಾಗಿದೆ ಹಾಗೂ ಈ ಬೃಹತ್ ಯೋಜನೆಯಲ್ಲಿ ಸಂಸ್ಥೆಯ ಮುಖ್ಯಸ್ಥರ ನೆರವನ್ನೂ ಪಡೆಯಲಾಗುವುದು ಎಂದು ತಿಳಿಸಿದರು.