ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಪಟ್ಟಿ ಪ್ರಕಟಿಸಿದೆ. ಅಲ್ಲದೇ 9 ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾರಣಾಂತರಗಳಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆಯನ್ನೂ ಘೋಷಿಸಲಾಗಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದೆ.
ಚುನಾವಣಾ ಆಯೋಗ ಇಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಐದು ನಗರಸಭೆ, 19 ಪುರಸಭೆ ಹಾಗೂ ಪಟ್ಟಣ ಪಂಚಾಯತ್ಗಳ 1185 ವಾರ್ಡ್ಗಳಿಗೆ ಚುನಾವಣೆ ಜರಗಲಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಡಿ. 8ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ಅಂದಿನಿಂದಲೇ ಚುನಾವಣೆ ನಡೆಯುವ ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಡಿ. 8ರಿಂದ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಡಿ. 15 ಕೊನೆಯ ದಿನವಾಗಿದ್ದು, 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ. 18ರವರೆಗೆ ಅವಕಾಶವಿದೆ. ಡಿ. 27ರಂದು ಬೆಳಗ್ಗೆ 7ರಿಂದ 5ಗಂಟೆಯವರೆಗೆ ಮತದಾನ ನಡೆಯಲಿದೆ. ಮರುಮತದಾನದ ಅಗತ್ಯಬಿದ್ದರೆ ಡಿ. 29ರಂದು ನಡೆಸಲಾಗುತ್ತದೆ. ಮತ ಎಣಿಕೆ 31ರಂದು ಬೆಳಗ್ಗೆ 8ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಮಹಾನಗರ ಪಾಲಿಕೆಗೆ ₹ 3ಲಕ್ಷ, ನಗರಸಭೆಗೆ ₹ 2ಲಕ್ಷ, ಪುರಸಭೆಗೆ ₹ 1.5ಲಕ್ಷ ಮತ್ತು ಪಟ್ಟಣ ಪಂಚಾಯತ್ಗೆ ₹ 1ಲಕ್ಷ ಚುನಾವಣಾ ವೆಚ್ಚದ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ. ಮತಪತ್ರಗಳಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ಅವರ ಭಾವಚಿತ್ರವನ್ನು ಮುದ್ರಿಸಲಾಗುತ್ತದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣೆಯ ಎಲ್ಲ ಹಂತದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.