ಬೆಂಗಳೂರು: ರಾಜ್ಯದಲ್ಲಿ ಅಥವಾ ಕೋವಿಡ್ ಸಂಬಂಧಿಸಿ ಮತ್ತೊಮ್ಮೆ ಲಾಕ್ ಡೌನ್ ಅಥವಾ ಇನ್ನು ಯಾವುದೇ ಊಹಾಪೋಹದ ಕ್ರಮಗಳ ಬಗ್ಗೆ ಚಿಂತನೆ ಸರಕಾರದ ಮುಂದೆ ಇಲ್ಲ. ಜನ ಜೀವನ ಈಗಿರುವಂತೆಯೇ ಮುಂದುವರಿಯಬೇಕು ಎಂಬುದು ನಮ್ಮ ಆಶಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇಂದು ಸಭೆಯನ್ನು ನಡೆಸುತ್ತಿದ್ದಾರೆ. ಸಭೆಯಲ್ಲಿ ಕೂಲಂಕಷವಾಗಿ ಎಲ್ಲ ಚರ್ಚೆ ನಡೆಯಲಿದೆ. ಸಭೆಯಲ್ಲಿ ಚರ್ಚಿಸಿದ ವಿಚಾರಗಳ ಬಗ್ಗೆ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ರಾಜ್ಯದಲ್ಲಿರುವ ಸ್ಥಿತಿಯನ್ನು ಗಮನಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದರು.
ಒಂದು ಕಡೆ ಹೊಸ ತಳಿ ಒಮಿಕ್ರಾನ್ ಬಗ್ಗೆ ಅಂತಾರಾಷ್ಟ್ರೀಯ, ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯದಲ್ಲಿ ಏನು ಪರಿಣಾಮ ಆಗುತ್ತದೆ ಎಂಬುದನ್ನು ಗಮನಿಸುತ್ತಿದ್ದೇವೆ. ಇನ್ನೊಂದೆಡೆ ಈಗಿರುವ ಡೆಲ್ಟಾ ರೂಪಾಂತರಿಯಲ್ಲಿ ಅಲ್ಲಲ್ಲಿ ಕ್ಲಸ್ಟರ್ ಆಗುತ್ತಿರುವುದನ್ನು ರಾಜ್ಯ ಸರಕಾರ ನಿಭಾಯಿಸಬೇಕಾಗಿದೆ. ಎರಡು ಹಂತದಲ್ಲಿ ನಿಭಾಯಿಸುವ ಕೆಲಸ ಸರಕಾರ ಮಾಡಬೇಕಾಗಿದೆ.
ನಾವು ವೈಜ್ಞಾನಿಕವಾಗಿ ಹೊಸ ರೂಪಾಂತರಿಯ ಬಗ್ಗೆ ರಾಜ್ಯ ಸರಕಾರ ನಿಗಾ ವಹಿಸುತ್ತಿದೆ. ಎನ್ಸಿಬಿಎಸ್ ಗೆ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಿದೆ. ವಿದೇಶದಿಂದ ಬಂದಿರುವ ಪ್ರಯಾಣಿಕರ ಬಗ್ಗೆ ವಿಶೇಷ ನಿಗಾ ಇಡುತ್ತಿದ್ದೇವೆ. ಪ್ರಯಾಣಿಕರ ಟ್ರ್ಯಾಕಿಂಗ್, ಟ್ರೇಸಿಂಗ್ ಹಾಗೂ ಅವರ ಸಂಪರ್ಕಕ್ಕೆ ಬಂದಿರುವವರನ್ನು ಕೂಡ ಟ್ರ್ಯಾಕಿಂಗ್, ಟ್ರೇಸಿಂಗ್ ಮಾಡಲಾಗುತ್ತದೆ. ಕ್ಲಸ್ಟರ್ ಗಳಿಗೂ ವಿಶೇಷ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಅಲ್ಲಿರುವ ಎಲ್ಲರನ್ನು ಪರೀಕ್ಷೆ ಮಾಡಿ, ನಂತರ 7 ದಿನಗಳ ನಂತರ ಮತ್ತೆ ಪರೀಕ್ಷೆ ಮಾಡಬೇಕು. ಎಸ್ ಡಿಎಂನಲ್ಲಿ 4000ಕ್ಕೂ ಅಧಿಕ ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಮೈಸೂರು, ಹಾಸನ, ಬೆಂಗಳೂರು, ಆನೇಕಲ್ ನಲ್ಲಿಯೂ ಎಲ್ಲರ ಪರೀಕ್ಷೆ ಮಾಡವಾಗುತ್ತದೆ. ರಾಜ್ಯದಲ್ಲಿ ಸಾಮಾನ್ಯ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಜನರು ಮತ್ತು ಜನಸಂದಣಿ ಸೇರುವ ಜಾಗದಲ್ಲಿ ಕೋವಿಡ್ ನಿಯಮಗಳು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು. ಜನರನ್ನು ಸೇರಿಸುವ ಯಾವುದೇ ಸಂಘ ಸಂಸ್ಥೆಗಳು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಅತ್ಯಂತ ಕಟ್ಟೆಚ್ಚರವನ್ನು ವಹಿಸುತ್ತಿದ್ದೇವೆ. ಕಸ್ಟರ್ ಇರುವಲ್ಲಿ ವಿಶೇಷವಾಗಿ ನಿಗಾ ವಹಿಸುತ್ತಿದ್ದೇವೆ ಎಂದು ಸಿಎಂ ಹೇಳಿದರು.