ಬೆಂಗಳೂರು, ಡಿ.8 : ಪೊಲೀಸ್ ಅಧಿಕಾರಿ ಮನೆಯಲ್ಲೇ ಕಳ್ಳತನ ಮಾಡಿದ್ದ ಕೆಲಸದಾಕೆ ಸಿಕ್ಕಿಬಿದ್ದಿದ್ದು, ಸಂಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂಜಯನಗರದಲ್ಲಿ ನಗರದ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ಮನೆಯಲ್ಲಿ ಕೆಲ ವರ್ಷಗಳಿಂದ ಹಾವೇರಿ ಮೂಲದ ಅಂಕಿತಾ ಎಂಬ ಮಹಿಳೆ ಮನೆಕೆಲಸ ಮಾಡಿಕೊಂಡಿದ್ದಳು.
ಇತ್ತೀಚೆಗೆ ಮನೆಯಲ್ಲಿ ಯಾರಿಗೂ ಹೇಳದೆ ಕೆಲಸದಾಕೆ ನಾಪತ್ತೆಯಾಗಿದ್ದಳು. ನಂತರ ಮನೆಯಲ್ಲಿ ಮೊಬೈಲ್ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳು ಕಳುವಾಗಿರುವುದು ಗೊತ್ತಾಗಿ ಆಕೆಯ ಮೇಲೆ ಸಂಶಯ ವ್ಯಕ್ತಪಡಿಸಿ ಕಾರು ಚಾಲಕ ಜಗದೀಶ್ ಸಂಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮನೆಕೆಲಸದ ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಕೊನೆಗೂ ಆಕೆ ಸಿಕ್ಕಿಬಿದ್ದು ಪೊಲೀಸರ ವಶದಲ್ಲಿದ್ದಾಳೆ. ಇದೀಗ ಪೊಲೀಸರು ಆ ಮಹಿಳೆಯನ್ನು ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.