ಬೆಂಗಳೂರು: ಕೊರೋನಾದ ರೂಪಾಂತರಿ ತಳಿ ಒಮಿಕ್ರೊನ್ ಸೋಂಕು ದೃಢಪಟ್ಟವರಿಗೆ ಕಡ್ಡಾಯವಾಗಿ 10 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ, ಬಿಡುಗಡೆಗೂ ಮುನ್ನ ಎರಡು ಬಾರಿ ನೆಗೆಟಿವ್ ವರದಿ ಹಾಗೂ ಒಂದು ವಾರ ಹೋಂ ಕ್ವಾರಂಟೈನ್‌ಗೆ ಸೂಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.ಒಮಿಕ್ರೊನ್ ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ದಾಖಲಿಸಿ 10 ದಿನ ಚಿಕಿತ್ಸೆ ನೀಡಬೇಕು.
ತಜ್ಞರ ಸಮಿತಿ ಚರ್ಚಿಸಿ ನೀಡಿದ ಸಲಹೆ ಆಧರಿಸಿ ಇಲಾಖೆಯು ಒಮಿಕ್ರೊನ್ ಸೋಂಕು ಪರೀಕ್ಷೆ, ಚಿಕಿತ್ಸೆಗಳ ಕುರಿತು ಮಾರ್ಗಸೂಚಿ ಪ್ರಕಟಿಸಿದೆ.
ಬಿಡುಗಡೆಗೂ ಸತತ ಮೂರು ದಿನ ಮುನ್ನ ಸೋಂಕಿನ ಲಕ್ಷಣಗಳಿರಬಾರದು. ಸತತ ನಾಲ್ಕು ದಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣ (ಸ್ಯಾಚುರೇಷನ್) ಶೇ.95ಕ್ಕಿಂತ ಹೆಚ್ಚಿರಬೇಕು. ಮುಖ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನ 24 ಗಂಟೆಗಳಲ್ಲಿ ಎರಡು ಬಾರಿ ಸೋಂಕು ಪರೀಕ್ಷೆ ವರದಿ ನೆಗೆಟಿವ್ ಬರಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟರೆ ಮತ್ತೆ ೪೮ ಗಂಟೆಗಳ ಬಳಿಕ ಪರೀಕ್ಷೆ ನಡೆಸಬೇಕು.
ಇವುಗಳ ಜತೆಗೆ ಬಿಡುಗಡೆ ಸಂದರ್ಭದಲ್ಲಿ ಡಿ-ಡಿಮ್ಮರ್, ಎಸ್.ಫೆರಿಟಿನ್, ಎಸ್.ಎಲ್‌ಡಿಎಚ್ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಸಮಾಧಾಕರವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸೋಂಕಿತರಿಗೆ ಏಳು ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಸೂಚಿಸಬೇಕು. ಒಂದು ವೇಳೆ ಹೋಂ ಕ್ವಾರಂಟೈನ್ ಸೌಲಭ್ಯ ಇಲ್ಲವಾದರೆ ಸಾಂಸ್ಥಿಕ ಕ್ವಾರಂಟೈನ್‌ಗೆ ಸಲಹೆ ನೀಡಬೇಕು. ಈ ಅವಧಿಯಲ್ಲಿ ಆರೋಗ್ಯ ಸಿಬ್ಬಂದಿ ದೂರವಾಣಿ ಮೂಲಕ ನಿಗಾವಹಿಸಬೇಕು.
ಆರನೇ ದಿನ ಮತ್ತೊಮ್ಮೆ ಸೋಂಕು ಪರೀಕ್ಷೆ ನಡಿಸಿ ವರದಿ ನೆಗೆಟಿವ್ ಬಂದ ಬಳಿಕ ಹೋಂ ಕ್ವಾರಂಟೈನ್ ತೆರವು ಮಾಡಬಹುದು. ಉಳಿದಂತೆ ಎಚ್‌ಐವಿ ರೋಗಿಗಳು, ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೊಳಪಟ್ಟವರು ಹಾಗೂ ಇತರೆ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಒಮಿಕ್ರೊನ್ ಸೋಂಕು ದೃಢಪಟ್ಟಿದ್ದರೆ ಹೆಚ್ಚಿನ ನಿಗಾವಹಿಸಬೇಕು. ಸಂಪೂರ್ಣ ಗುಣಮುಖರಾದ ಬಳಿಕವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು. ಜತೆಗೆ ಇತರೆ ಒಮಿಕ್ರೊನ್ ಸೋಂಕಿತರ ಬಿಡುಗಡೆ ಸಂದರ್ಭದಲ್ಲಿ ಸೂಚಿಸಿರುವ ಕ್ರಮಗಳನ್ನೆ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.