ಬೆಂಗಳೂರು: ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ ತಮ್ಮ ಶೈಕ್ಷಣಿಕ ಚಟುವಟಿಕೆಗಳು ಮತ್ತು ಆದ್ಯತೆಗಳನ್ನು ನಡೆಸುವುದು ಭಾರತೀಯ ವಿಶ್ವವಿದ್ಯಾಲಯಗಳ ಜವಾಬ್ದಾರಿಯಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಓ.ಪಿ ಜಿಂದಾಲ್ ವಿಶ್ವವಿದ್ಯಾಲಯ ನಗರದ ತಾಜ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಬೆಂಗಳೂರು ಸುಸ್ಥಿರತೆ ಸಮಾವೇಶವನ್ನು ಉದ್ಘಾಟಿಸಿ, ಸುಸ್ಥಿರ ಅಭಿವೃದ್ಧಿ ವರದಿಯನ್ನು ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿ ಯಾವಾಗಲೂ ನಮ್ಮ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲ ತತ್ವವಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಾವು ಬಹು ರಂಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಭಾರತವು ದೀರ್ಘಕಾಲದವರೆಗೆ ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲು ಶ್ರಮಿಸುತ್ತಿದೆ ಮತ್ತು ಅದರ ವಿವಿಧ ಅಭಿವೃದ್ಧಿ ನೀತಿಗಳಲ್ಲಿ ತನ್ನ ಮೂಲಭೂತ ತತ್ವಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದರು.
ವಿಶ್ವಾದ್ಯಂತ ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಕೊರೊನಾ ಹಾವಳಿ ಸಂದರ್ಭದಲ್ಲೂ ನಾವು ಉತ್ತಮ ಬೆಳವಣಿಗೆಯ ದರವನ್ನು ಕಾಪಾಡಿಕೊಳ್ಳಲು ಸಮರ್ಥರಾಗಿದ್ದೇವೆ. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ – ಗ್ರಾಮೀಣ ಮತ್ತು ನಗರ, ಡಿಜಿಟಲ್ ಇಂಡಿಯಾ, ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಸ್ಕಿಲ್ ಇಂಡಿಯಾ ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ಭಾರತ ಸರ್ಕಾರವು ಅನುಷ್ಠಾನಗೊಳಿಸಿರುವ ಹಲವಾರು ಕಾರ್ಯಕ್ರಮಗಳು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿವೆ ಎಂದರು.
ಭಾರತದಲ್ಲಿನ ಅನೇಕ ವಿಶ್ವವಿದ್ಯಾನಿಲಯಗಳು ತಮ್ಮ ದೊಡ್ಡ ಕ್ಯಾಂಪಸ್ ಗಳು ಮತ್ತು ವಿಶಿಷ್ಟ ಭೌಗೋಳಿಕ ಸ್ಥಳದೊಂದಿಗೆ ಸ್ಥಳೀಯ ಜೀವವೈವಿಧ್ಯದ ಪಾಲಕರಾಗಲು ಪ್ರಯತ್ನಗಳನ್ನು ಮಾಡುತ್ತಿವೆ. ವಿಶ್ವವಿದ್ಯಾನಿಲಯಗಳಿಂದ ‘ಸುಸ್ಥಿರ’ ಪರಿಸರ ಉಪಕ್ರಮಗಳ ಅನುಷ್ಠಾನವು ‘ವಿಶ್ವ ಪರಿಸರ ದಿನಾಚರಣೆ’ಯ ನಿಜವಾದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಕಾಳಜಿಯು ಪರಿಸರ ಸಂರಕ್ಷಣೆಯ ಬಗ್ಗೆ ಯೋಚಿಸುವಂತೆ ಒತ್ತಾಯಿಸಿದೆ. ಅದರಲ್ಲೂ ಆಮ್ಲಜನಕದ ಕೊರತೆಯಿಂದ ಪರಿಸರ ಸಂರಕ್ಷಣೆಯತ್ತ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂಬುದನ್ನು ಎಲ್ಲರೂ ಅರಿತುಕೊಂಡಿದ್ದಾರೆ ಎಂದು ಹೇಳಿದರು. ಸಮಾವೇಶದಲ್ಲಿ ಓಪಿ ಜಿಂದಾಲ್ ವಿಶ್ವವಿದ್ಯಾಲಯದ ಸಂಸ್ಥಾಪಕ ಉಪ ಕುಲಪತಿ ಪ್ರೋ.ಸಿ ರಾಜ್ ಕುಮಾರ್, ಮಾಜಿ ಸಂಸದರಾದ ಎಂ ವಿ ರಾಜೀವ್ ಗೌಡ, ನಿವೃತ್ತ ಐಎಎಸ್ ಅಧಿಕಾರಿ ಕೆ ಜೈರಾಜ್, ಟ್ರಸ್ಟ್ ಕಾನೂನು ವಕೀಲರಾದ ಶ್ರೀ ಸುಧೀರ್ ಮಿಶ್ರಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.