News Kannada
Wednesday, October 05 2022

ಬೆಂಗಳೂರು ನಗರ

ಸಚಿವ ಸಂಪುಟ ವಿಸ್ತರಣೆಗೆ ಶಾಸಕರಿಂದ ಒತ್ತಡ: ದೆಹಲಿಗೆ ಹೊರಟ ಮುಖ್ಯಮಂತ್ರಿ ಬೊಮ್ಮಾಯಿ - 1 min read

Photo Credit :

ಬೆಂಗಳೂರು, ಫೆ. 02 ; ಸಚಿವ ಸಂಪುಟ ವಿಸ್ತರಣೆಗೆ ಶಾಸಕರಿಂದ ನಿರಂತರ ಒತ್ತಡಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೊರಟು ನಿಂತಿದ್ದಾರೆ. ಸೋಮವಾರ ಅವರು ದೆಹಲಿಗೆ ತೆರಳಲಿದ್ದು, ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ.

ಸೋಮವಾರ ಬೆಳಗ್ಗೆ ದೆಹಲಿಗೆ ತೆರಳಲಿರುವ ಬಸವರಾಜ ಬೊಮ್ಮಾಯಿ ಎರಡು ದಿನಗಳ ಕಾಲ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಪ್ರಮುಖರನ್ನು ಭೇಟಿಯಾಗಲಿದ್ದಾರೆ.

ಸಚಿವ ಸಂಪುಟ ಪುನಾರಚನೆ/ ವಿಸ್ತರಣೆ, ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ, ಕಳೆದ ಆರು ತಿಂಗಳ ಅವಧಿಯಲ್ಲಿ ಸರ್ಕಾರದ ಸಾಧನೆ, ಕೋವಿಡ್ ನಿರ್ವಹಣೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸಿಎಂ ದೆಹಲಿ ಪ್ರವಾಸ ಘೋಷಣೆಯಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಇತ್ತ ಸಂಪುಟ ಪುನಾರಚನೆಯಾದರೆ ಯಾರಿಗೆ ಸಚಿವ ಸ್ಥಾನ ಕೈತಪ್ಪಲಿದೆ? ಎಂಬ ಲೆಕ್ಕಾಚಾರ ಆರಂಭಗೊಂಡಿದೆ. ಗುರುವಾರ ಸಿಎಂ ದೆಹಲಿಗೆ ತೆರಳಬೇಕಿತ್ತು. ಆದರೆ ಈಗ ತಮ್ಮ ಪ್ರವಾಸವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಬಜೆಟ್ ಅಧಿವೇಶನ, ಐದು ರಾಜ್ಯಗಳ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಹಿನ್ನಲೆಯಲ್ಲಿ ಯಾವ ಯಾವ ವರಿಷ್ಠ ನಾಯಕರು ಬಸವರಾಜ ಬೊಮ್ಮಾಯಿ ಭೇಟಿಗೆ ಲಭ್ಯವಿರಲಿದ್ದಾರೆ? ಎಂಬ ಮಾಹಿತಿ ಇನ್ನೂ ಖಚಿತಗೊಂಡಿಲ್ಲ. ಆದರೆ ಎರಡು ದಿನಗಳ ಕಾಲ ನವದೆಹಲಿಯಲ್ಲಿಯೇ ವಾಸ್ತವ್ಯ ಹೂಡಿ ಸಂಪುಟ ರಚನೆ/ ಪುನಾರಚನೆ ಬಗ್ಗೆ ಸ್ಪಷ್ಟ ಸಂದೇಶವನ್ನು ಹೊತ್ತು ಮುಖ್ಯಮಂತ್ರಿಗಳು ರಾಜ್ಯಕ್ಕೆ ವಾಪಸ್ ಆಗುವ ನಿರೀಕ್ಷೆ ಇದೆ. ಇಲ್ಲವೇ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟ (ಮಾರ್ಚ್ 10) ತನಕ ಕಾಯುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ಸಿಗುವ ಸಾಧ್ಯತೆಯೂ ಇದೆ.

ಬಿಜೆಪಿಯ ಹಿರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಂ. ಪಿ. ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಅಪ್ಪಚ್ಚು ರಂಜನ್, ಕೆ. ಜಿ. ಬೋಪಯ್ಯ, ಎಸ್. ಎ. ರಾಮದಾಸ್, ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಶಿವರಾಜ್ ಪಾಟೀಲ್, ಪೂರ್ಣಿಮಾ ಶ್ರೀನಿವಾಸ್, ಉಪಸಭಾಪತಿ ಆನಂದ್ ಮಾಮನಿ, ಸೇರಿದಂತೆ ಅನೇಕರು ಸಂಪುಟ ವಿಸ್ತರಣೆಯಾಗಲೇಬೇಕೆಂದು ಒತ್ತಾಯಿಸಿದ್ದರು. ಅಲ್ಲದೇ ಕೆಲವು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿ ಕೆಲವು ಸಚಿವರನ್ನು ಕೈಬಿಟ್ಟು ಕಡೆ ಪಕ್ಷ ಚುನಾವಣಾ ವರ್ಷದಲ್ಲಾದರೂ ಪಕ್ಷ ನಿಷ್ಠರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಸಿಎಂ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸದ್ಯ 4 ಸ್ಥಾನಗಳು ಖಾಲಿ ಇದೆ. ಕೆಲವು ಸಚಿವರಿಗೆ ಕೋಕ್ ನೀಡಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇಂಗಿತವನ್ನು ತಮ್ಮ ಆಪ್ತರ ಬಳಿ ಸಿಎಂ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

See also  ಪಾಕಿಸ್ತಾನದಲ್ಲಿ ಹಿಂದೂಗಳು, ಕ್ರೈಸ್ತರು ಸುರಕ್ಷಿತ: ಅಬ್ದುಲ್‌ ಬಸಿತ್‌

ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಕೆಲವು ಸಚಿವರ ಎದೆಬಡಿತ ಜೋರಾಗಿದೆ. ಈ ಬಾರಿ ವಿಸ್ತರಣೆ ಮಾತ್ರವಲ್ಲದೆ ಪುನಾರಚನೆಯಾಗುವುದು ಬಹುತೇಕ ಖಚಿತವಾಗಿರುವುದರಿಂದ ತಮ್ಮನ್ನು ಎಲ್ಲಿ ಕೈ ಬಿಡಲಿದ್ದಾರೋ? ಎಂಬ ಆತಂಕ ಕೆಲವರನ್ನು ಕಾಡುತ್ತಿದೆ. ಮೂಲಗಳ ಪ್ರಕಾರ ಈ ಬಾರಿ ಪುನಾರಚನೆಯಾದರೆ ಹಾಲಿ ಸಂಪುಟದಲ್ಲಿರುವ ಕನಿಷ್ಟ 8ಕ್ಕೂ ಹೆಚ್ಚು ಸಚಿವರು ಗೇಟ್‍ಪಾಸ್ ಪಡೆಯಲಿದ್ದು, ಪಕ್ಷ ನಿಷ್ಠರಿಗೆ ಮಣೆ ಹಾಕುವ ಸಂಭವವಿದೆ.

ಈ ಹಿಂದೆ 2006, 2008 ರಿಂದ 2013 ಹಾಗೂ ಮಾಜಿ ಸಿಎಂ ಯಡಿಯೂರಪ್ಪ , ಹಾಲಿ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿರುವ ಅನೇಕರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಮುಂದಿನ ವರ್ಷ ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಕೆಲವು ಹಿರಿಯರನ್ನು ಪಕ್ಷ ಸಂಘಟನೆಗೆ ನಿಯೋಜಿಸುವುದು, ಸಂಘ ಪರಿವಾರದ ಹಿನ್ನಲೆ ಹೊಂದಿರುವವರನ್ನೇ ಸಂಪುಟಕ್ಕೆ ತೆಗೆದುಕೊಳ್ಳಲು ಚಿಂತನಮಂಥನ ನಡೆದಿದೆ. ಒಂದು ವೇಳೆ ಇದಕ್ಕೆ ವರಿಷ್ಠರು ಗ್ರೀನ್ ಸಿಗ್ನಲ್ ಕೊಟ್ಟರೆ ಕನಿಷ್ಟ 8 ಸಚಿವರು ಸಂಪುಟದಿಂದ ಹೊರಗುಳಿಯುವ ಸಂಭವವೇ ಹೆಚ್ಚಾಗಿದೆ.

ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಸಾಧಿಸಬೇಕೆಂಬ ಬೇಡಿಕೆ ಕೂಡ ಇದೆ. ಕೆಲವು ಸಚಿವರು ಶಾಸಕರ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿಲ್ಲ ಎಂಬ ಆರೋಪವೂ ಪದೇ ಪದೇ ಕೇಳಿಬರುತ್ತಿದೆ. ಶಾಸಕಾಂಗ ಸಭೆಯಲ್ಲೂ ಕೆಲವು ಸಚಿವರ ವಿರುದ್ಧ ಶಾಸಕರು ಬಹಿರಂಗವಾಗಿಯೇ ಕಿಡಿಕಾಡಿದ್ದರು. ನಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ತಾಂತ್ರಿಕ ಕಾರಣಗಳು ಇಲ್ಲವೇ ಕುಂಟು ನೆಪ ಹೇಳುತ್ತಿದ್ದಾರೆ. ಮಧ್ಯವರ್ತಿಗಳಿಂದ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುತ್ತದೆ ಎಂಬುದು ಬಹುತೇಕ ಶಾಸಕರ ಆರೋಪವಾಗಿತ್ತು. ಹೀಗಾಗಿ ಅದಕ್ಷ ಸಚಿವರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಬಹುದು. ಸಚಿವರಾದ ಗೋವಿಂದ ಕಾರಜೋಳ, ಕೆ. ಎಸ್. ಈಶ್ವರಪ್ಪ, ವಿ. ಸೋಮಣ್ಣ, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಕೆ. ಸಿ. ನಾರಾಯಣಗೌಡ, ಮುರುಗೇಶ್ ನಿರಾಣಿ ಸೇರಿದಂತೆ ಕನಿಷ್ಠ ಪಕ್ಷ 8 ಸಚಿವರು ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

2023ರ ವಿಧಾನಸಭೆ ಚುನಾವಣೆಗೂ ಮೊದಲು 245 ವಾರ್ಡ್‌ಗಳ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಬಿಬಿಎಂಪಿ ಚುನಾವಣೆ ಕಾರಣಕ್ಕಾಗಿ ಕಂದಾಯ ಸಚಿವ ಆರ್. ಅಶೋಕ ತಲೆ ದಂಡವಾಗುವ ಭೀತಿಯಿಂದ ಪಾರಾಗಿದ್ದರೆ, ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಕಾರಣಕ್ಕಾಗಿ ಮಾಧುಸ್ವಾಮಿ ಕೂಡ ಮುಂದುವರೆಯಲಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್, ಜೆಡಿಎಸ್‌ನಿಂದ ಬಂದವರು ಸಚಿವರಾಗಿದ್ದಾರೆ ಎಂಬ ಆರೋಪ ಹಿರಿಯ ಬಿಜೆಪಿ ಶಾಸಕರದ್ದು, ಸಂಪುಟ ವಿಸ್ತರಣೆ/ ಪುನಾರಚನೆ ಬಿಜೆಪಿ ನಾಯಕರು ಅಂದುಕೊಂಡಷ್ಟು ಸುಲಭವಾಗಿಲ್ಲ ಎಂಬುದು ಹಲವು ನಾಯಕರಿಗೆ ತಿಳಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು