ಬೆಂಗಳೂರು : ಇಡೀ ವಿಶ್ವದ ಗಮನ ಸೆಳೆದಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ಕಾರಣದಿಂದಾಗಿ ದೇಶದ ಕಾಫಿ ರಫ್ತಿಗೆ ಹಿನ್ನಡೆ ಅಗಲಿದೆ ಎಂದು ಕಾಫಿ ಮಂಡಳಿ ಮೂಲಗಳು ತಿಳಿಸಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದಿಂದ ಉಕ್ರೇನ್ ಗೆ 6,604 ಮೆಟ್ರಿಕ್ ಟನ್‌ಗಳಷ್ಟು ನಮ್ಮ ಕಾಫಿಯನ್ನು ರಫ್ತು ಮಾಡಲಾಗಿದೆ. ಪ್ರಸ್ತುತ ಬಿಕ್ಕಟ್ಟು ಉಕ್ರೇನ್ ಮತ್ತು ನೆರೆಯ ರಾಷ್ಟ್ರಗಳಿಗೆ ಭಾರತೀಯ ಕಾಫಿ ರಫ್ತು ಅಪಾಯಕ್ಕೆ ಸಿಲುಕಿದೆ ಎಂದು ಕಾಫಿ ಮಂಡಳಿ ತಿಳಿಸಿದೆ.
ಕಾಫಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಜಿ ಜಗದೀಶ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಕಳೆದ 2021 ಏಪ್ರಿಲ್ ನಿಂದ ಜನವರಿ 31 ರ ವರೆಗೆ ಭಾರತವು 6,604 ಮೆಟ್ರಿಕ್ ಟನ್ ಹಸಿರು ಬೀನ್, ಇನ್ ಸ್ಟಂಟ್ ಮತ್ತು ಹುರಿದ ಕಾಫಿಯನ್ನು ಉಕ್ರೇನ್‌ಗೆ ಮತ್ತು 23,519 ಮೆಟ್ರಿಕ್ ಟನ್‌ಗಳಷ್ಟು ಕಾಫಿಯನ್ನು ರಷ್ಯಾ ಕ್ಕೆ ರಫ್ತು ಮಾಡಲಾಗಿದೆ. 2018-19 ರ ಆರ್ಥಿಕ ವರ್ಷದಲ್ಲಿ ಉಕ್ರೇನ್ ಗೆ ಒಟ್ಟು 7,327 ಮೆಟ್ರಿಕ್ ಟನ್‌ಗಳಷ್ಟು ಕಾಫಿಯನ್ನು ರಫ್ತು ಮಾಡಲಾಗಿತ್ತು. ಮತ್ತು 2019-20 ರಲ್ಲಿ ಇದು 6,947 ಮೆಟ್ರಿಕ್ ಟನ್‌ಗಳಷ್ಟಿತ್ತು ಎಂದು ಅವರು ತಿಳಿಸಿದರು.
ಸಿಐಎಸ್ (Commonwealth of Independent states ) ಒಕ್ಕೂಟದ 11 ದೇಶಗಳು ಭಾರತದಿಂದ ಕಾಫಿಯನ್ನು ಆಮದು ಮಾಡಿಕೊಳ್ಳುವ ಸಾಂಪ್ರದಾಯಿಕ ದೇಶಗಳಾಗಿವೆ. ಈ ಸಿಐಎಸ್ ಒಕ್ಕೂಟವನ್ನು 1991 ರಲ್ಲಿ ರಚನೆ ಮಾಡಲಾಗಿದ್ದು ಇದರಲ್ಲಿ ಅರ್ಮೇನಿಯ, ಬೆಲಾರಸ್ , ಕಝಕಿಸ್ಥಾನ, ಕಿರ್ಗಿಸ್ಥಾನ, ಮೊಲ್ಡಾವಿಯ, ಉಜ್ಬೇಕಿಸ್ಥಾನ್ ,ತಜಕಿಸ್ಥಾನ್ , ರಷ್ಯಾ ತುರ್ಕಮೆನಿಸ್ಥಾನ್ ಮತ್ತು ಉಕ್ರ್ಯೇನ್ ಇವೆ. . ಕಾಫಿ ಬೋರ್ಡ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ದೇಶಗಳಿಗೆ ಭಾರತದಿಂದ ರಫ್ತಾಗುವ ಕಾಫಿಯಲ್ಲಿ ರಷ್ಯಾ ಶೇಕಡಾ 75 ರಷ್ಟು ಪಾಲನ್ನು ಹೊಂದಿದ್ದು ಉಕ್ರೇನ್ 20% ಕ್ಕಿಂತ ಹೆಚ್ಚು ಪಾಲನ್ನು
ಹೊಂದಿದೆ. ಕಾಫಿ ರಫ್ತುದಾರರ ಪ್ರಕಾರ, ರಫ್ತಿನ ಮೇಲೆ ತಕ್ಷಣದ ಪ್ರಭಾವದ ಜೊತೆಗೆ, ಯುದ್ಧವು ಭಾರತದಿಂದ ಉಕ್ರೇನ್ ಮತ್ತು ನೆರೆಯ ಕಾಫಿ ಮಾರುಕಟ್ಟೆಗಳಿಗೆ ಕಾಫಿ ರಫ್ತಿನ ಮೇಲೆ ಪರೋಕ್ಷ ಮತ್ತು ದೀರ್ಘಾವಧಿಯ ಪರಿಣಾಮವನ್ನು ಬೀರಬಹುದು.
“ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದ ಇಂಧನ, ಲೋಹ / ಅಲ್ಯೂಮಿನಿಯಂ ( ಇನ್‌ಸ್ಟಂಟ್ ಕಾಫಿಯನ್ನು ಮತ್ತು ಸಾಮಾನ್ಯ ಕಾಫಿಯನ್ನು ಹೆಚ್ಚಾಗಿ ಲೋಹದ ಕ್ಯಾನ್‌ಗಳು ಮತ್ತು ಕಂಟೈನರ್‌ಗಳಲ್ಲಿ ರಫ್ತು ಮಾಡಲಾಗುತ್ತದೆ) ಮತ್ತು ಪ್ಯಾಕೇಜಿಂಗ್ ವಸ್ತುಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದು ಸಾಗಾಟದ ವೆಚ್ಚವನ್ನು ಕೂಡ ಹೆಚ್ಚಿಸಬಹುದು ”ಎಂದು ಕಾಫಿ ರಫ್ತುದಾರರ ಸಂಘದ ಅಧ್ಯಕ್ಷ ರಮೇಶ್ ರಾಜಾ ಹೇಳಿದರು. ಇದರಿಂದ ರಫ್ತಿನ
ಒಟ್ಟಾರೆ ವೆಚ್ಚವು ಖಂಡಿತವಾಗಿಯೂ ಹೆಚ್ಚಾಗುತ್ತದೆ ಮತ್ತು ಖರೀದಿದಾರರು ಮಾರಾಟಗಾರರು ಈಗಾಗಲೇ ಅದರ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಅವರು ಹೇಳಿದರು.
ಕಾಫಿಯನ್ನು ಪ್ಯಾಕ್ ಮಾಡಲು ಬಳಸುವ ಪ್ಯಾಕೇಜಿಂಗ್ ಕಚ್ಚಾ ವಸ್ತುಗಳ ಬೆಲೆಗಳು ಇತ್ತೀಚೆಗೆ 30% ರಷ್ಟು ಏರಿಕೆಯಾಗಿವೆ ಎಂದೂ ಅವರು ಹೇಳಿದರು.
ಉಕ್ರೇನ್ ಆ ಪ್ರದೇಶದಲ್ಲಿ ಕಾಫಿಯ ಅತಿ ದೊಡ್ಡ ಆಮದುದಾರರಲ್ಲಿ ಒಂದಾಗಿದೆ, ಆದರೆ ಭಾರತೀಯ ಕಾಫಿಯ ಅಗ್ರ 5 ಆಮದುದಾರರಲ್ಲಿ ರಷ್ಯಾ ಕೂಡ ಒಂದಾಗಿದೆ. “ಉಕ್ರೇನ್ ಹೆಚ್ಚಾಗಿ ಚಹಾ-ಸೇವಿಸುವ ದೇಶವಾಗಿದ್ದರೂ, ಟರ್ಕಿಶ್ ಮತ್ತು ಒಟ್ಟೋಮನ್ ಪ್ರಭಾವದಿಂದ ಕಾಫಿಯ ಆಮದನ್ನು ಮಾಡಿಕೊಳ್ಳುತ್ತಿದೆ. ಇದು ಪ್ರಬುದ್ಧ ಕಾಫಿ ಸಂಸ್ಕೃತಿಯನ್ನು ಹೊಂದಿದೆ” ಎಂದು ಅವರು ಹೇಳಿದರು. ಪ್ರಸ್ತುತ ಅನಿಶ್ಚಿತತೆಯು ನಿಸ್ಸಂಶಯವಾಗಿ
ರಫ್ತುದಾರರಿಗೆ ಮತ್ತು ಎಲ್ಲಾ ವಿಧದ ಭಾರತೀಯ ಕಾಫಿಗಳ ಆಮದುದಾರರಿಗೆ ಆತಂಕಕಾರಿಯಾಗಿದೆ
ಎಂದು ಅವರು ಹೇಳಿದರು.