ಬೆಂಗಳೂರು : ನಾನು ಯಾವುದೇ ತಪ್ಪು ಮಾಡಿಲ್ಲ, ನಾನ್ಯಾಕೆ ರಾಜೀನಾಮೆ ನೀಡಲಿ, ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ, ಕೋರ್ಟ್ ತೀರ್ಪು ಹೊರಬರಲಿ, ಇದು ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಆರೋಪಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ.
ಇಂದು ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬಹಿರಂಗವಾಗುತ್ತಿದ್ದಂತೆ ಅವರು ವಾಟ್ಸಾಪ್ ನಲ್ಲಿ ಕಳುಹಿಸಿದ್ದ ಸಂದೇಶ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ನನ್ನ ಆತ್ಮಹತ್ಯೆಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.
ಇದಕ್ಕೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ,ಸಂತೋಷ್ ಪಾಟೀಲೇ ತಪ್ಪು ಮಾಡಿದ್ದು, ನಾನು ಯಾವುದೇ ತಪ್ಪನ್ನು ಮಾಡಿಲ್ಲ, ದೆಹಲಿಯಲ್ಲಿ ಡಿ.ಕೆ ಸುರೇಶ್, ಹನುಮಂತಯ್ಯ ಅವರನ್ನು ಸಂತೋಷ್ ಭೇಟಿ ಮಾಡಿ ಸುದ್ದಿಗೋಷ್ಠಿ ನಡೆಸಿದ್ದರು. ಆ ಕಾಪಿಯನ್ನು ನಾನು ತೆಗೆದುಕೊಂಡು ಗುತ್ತಿಗೆದಾರ ಸಂತೋಷ್ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಕೇಸ್ ಹಾಕಿದ್ದೇನೆ ಎಂದರು.
ಕೋರ್ಟ್‍ನಿಂದ ನೋಟಿಸ್ ಹೋದ ನಂತರ ಭೀತಿಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ನೋಟಿಸ್ ಹೋದ ನಂತರ ಗಾಬರಿಯಾಗಿದ್ದಾರೆ ಅನಿಸುತ್ತೆ. ಸಂತೋಷ್ ಆತ್ಮಹತ್ಯೆಗೂ, ನನಗೂ ಏನೂ ಸಂಬಂಧವಿಲ್ಲ. ಸಂತೋಷ್ ಅವರನ್ನು ನಾನು ನೋಡಿಲ್ಲ. ಅವರು ಯಾರೂ ಎಂದೇ ನನಗೆ ಗೊತ್ತಿಲ್ಲ ಎಂದು ಹೇಳಿದರು.
40 ಪರ್ಸೆಂಟ್ ಕಮಿಷನ್ ಕುರಿತು ಗುತ್ತಿಗೆದಾರ ಸಂತೋಷ್ ನನ್ನ ಬಗ್ಗೆಯೂ ಅಲ್ಲ, ನಮ್ಮ ಕಡೆ ಅವರು ಯಾರೋ ಕೇಳುತ್ತಿದ್ದಾರೆ ಎಂದು ಪತ್ರ ಬರೆದಿದ್ದಾರೆ. ಇದರಿಂದಾಗಿ ನಾನು ಕಾನೂನುಬದ್ಧವಾಗಿ ಪ್ರಜಾಪ್ರಭುತ್ವದಲ್ಲಿ ಏನು ವ್ಯವಸ್ಥೆ ಇದೆಯೋ ಅದನ್ನು ಮಾಡಿದ್ದೇನೆ. ಸುಮ್ಮನೆ ಯಾವುದೇ ರಾಜಕಾರಣಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಪತ್ರಗಳನ್ನು ಬರೆದರೆ ಸಹಿಸಲು ಸಾಧ್ಯವಿಲ್ಲ. ಇದರಿಂದಾಗಿ ನಾನು ಕೋರ್ಟ್‍ಗೆ ಹೋಗಿದ್ದೇನೆ ಎಂದು ಹೇಳಿದ್ದಾರೆ.