News Kannada
Wednesday, October 05 2022

ಬೆಂಗಳೂರು ನಗರ

ಹಗರಣಗಳನ್ನು ಸರ್ಕಾರದ ಪ್ರಭಾವದಿಂದಷ್ಟೇ ಮುಚ್ಚಿಹಾಕಲು ಸಾಧ್ಯ: ಡಿ.ಕೆ. ಶಿವಕುಮಾರ್ - 1 min read

Photo Credit :

ಬೆಂಗಳೂರು : ‘ಹಗರಣಗಳನ್ನು ಸರ್ಕಾರದ ಪ್ರಭಾವದಿಂದಷ್ಟೇ ಮುಚ್ಚಿಹಾಕಲು ಸಾಧ್ಯ. ಪಿಎಸ್ಐ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ನಾಲ್ಕೈದು ಜನ ಆಯ್ಕೆಯಾಗಿದ್ದು, ಮೊದಲ ಸ್ಥಾನವನ್ನೂ ಪಡೆದಿದ್ದಾರೆ. ಇವರು ನಮಗೆ ಬೇಕಾದ ಹುಡುಗರೇ ಆಗಿದ್ದು, ಈ ಹಗರಣದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ. ಅವರಿಗೆ ಈ ಅಕ್ರಮದಲ್ಲಿ ಮಂತ್ರಿಗಳು ಸಹಾಯ ಮಾಡಿದ್ದಾರೋ, ಅವರ ಕುಟುಂಬದವರು ಮಾಡಿದ್ದಾರೋ, ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ.

ಆದರೆ, ನಾನು ಆ ಊರಿನ ಅಕ್ಕಪಕ್ಕದ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ಸರ್ಕಾರ ಈ ಅಕ್ರಮ ನೇಮಕಾತಿಗೆ ಅಂಗಡಿ ತೆರೆದ ಕಾರಣಕ್ಕೆ ಇವರುಗಳು ಅಲ್ಲಿಗೆ ಹೋಗಿದ್ದಾರೆ. ಅವರು ಅಂಗಡಿ ತೆರೆಯದಿದ್ದರೆ ಯಾರಾದರೂ ಇದರಲ್ಲಿ ಭಾಗಿಯಾಗುತ್ತಿದ್ದರಾ? ಪ್ರಭಾವಿಗಳು ಇಂತಹ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಮನೆ ಮಠ, ಆಸ್ತಿ ಪಾಸ್ತಿ ಮಾರಿಕೊಂಡು, ಸಾಲ ಮಾಡಿ, ಅಕ್ರಮ ಪ್ರಯತ್ನ ಮಾಡಿ ಸಿಕ್ಕಿಬಿದ್ದಿದ್ದಾರೆ. ಲಂಚ ಕೊಟ್ಟವರಾರೂ ಲಂಚ ಕೊಟ್ಟಿದ್ದೇನೆ ಎಂದು ಹೇಳುವುದಿಲ್ಲ. ಅದನ್ನು ಪಡೆದವನು ಕೂಡ ಲಂಚ ಪಡೆದಿರುವುದಾಗಿ ಹೇಳುವುದಿಲ್ಲ. ಆದರೆ ವಿಚಾರಣೆಗೆ ನೊಟೀಸ್ ಕೊಟ್ಟು, ಮಂತ್ರಿ ಸಂಬಂಧಿ ಪ್ರಭಾವ ಬೀರಿದರು ಎಂದು ವಿಚಾರಣೆ ಮಾಡದೇ ವಾಪಸ್ ಕಳುಹಿಸಲಾಗಿದೆ. ಪೊಲೀಸರು ಯಾರನ್ನು, ಯಾವ ರೀತಿ ವಿಚಾರಣೆ ಮಾಡಿದ್ದಾರೆ? ಮೊದಲನೇ ಸ್ಥಾನ ಪಡೆದವರನ್ನು ವಶದಲ್ಲಿಟ್ಟುಕೊಂಡು, ನಾಲ್ಕನೇ ಸ್ಥಾನ ಪಡೆದವರನ್ನು ಬಿಟ್ಟು ಕಳುಹಿಸಿರುವುದೇಕೆ?’

ಕಾಂಗ್ರೆಸ್ ನವರ ಬಳಿ ದಾಖಲೆ ಇಲ್ಲ ಎಂದು ಕುಮಾರಸ್ವಾಮಿ ಅವರು ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ಬಳಿ ದಾಖಲೆ ಇದೆಯೋ ಇಲ್ಲವೋ? ಅದು ಬೇರೆ ಪ್ರಶ್ನೆ. ಹಾಗಾದರೆ ಈ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ 17 ಜನರನ್ನು ಬಂಧನ ಮಾಡಿರುವುದೇಕೆ? ಕಾಂಗ್ರೆಸ್ ತನಿಖೆ ಮಾಡುವ ಸಂಸ್ಥೆಯೇ? ನಾವು ವಿರೋಧ ಪಕ್ಷದವರು. ಯಾರು ಎಷ್ಟು ಸ್ಥಾನ ಪಡೆದಿದ್ದಾರೆ ಎಂಬ ಬಗ್ಗೆ ಜನರೇ ನಮಗೆ ಮಾಹಿತಿ ನೀಡಿದ್ದಾರೆ. ಕೆಲವು ಅಧಿಕಾರಿಗಳೂ ಮಾಹಿತಿ ನೀಡಿದ್ದು, ನಾನು ಅವರ ಹೆಸರು ಹೇಳುವುದಿಲ್ಲ. ಮಾಧ್ಯಮಗಳಿಗೆ ಹೇಗೆ ಮೂಲಗಳ ಮೂಲಕ ದಾಖಲೆ, ಮಾಹಿತಿಗಳು ಸಿಗುತ್ತವೋ, ಅದೇರೀತಿ ನಮಗೂ ಲಭ್ಯವಾಗುತ್ತದೆ. ಕುಮಾರಸ್ವಾಮಿ ಅವರು ಅವರ ಮಾಹಿತಿ ಮೂಲ ಬಹಿರಂಗ ಪಡಿಸುತ್ತಾರಾ?’ ಎಂದು ಪ್ರಶ್ನಿಸಿದರು.

ಪ್ರಕರಣದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಅವರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ರಾಜ್ಯದಲ್ಲಿ ಅತ್ಯಂತ ಹೆಚ್ಚು ಭ್ರಷ್ಟ ಸಚಿವ ಎಂದರೆ ಅದು ಅಶ್ವತ್ಥ್ ನಾರಾಯಣ್. ಅದರಲ್ಲಿ ಅನುಮಾನವಿಲ್ಲ. ಮೇಲ್ನೋಟಕ್ಕೆ ನಾನು ಬ್ರಾಹ್ಮಣರಂತೆ ಶುದ್ಧವಾಗಿದ್ದೇನೆ, ಬಹಳ ಪ್ರಾಮಾಣಿಕ ರಾಜಕಾರಣಿ ಎಂದು ಬಿಂಬಿಸಿಕೊಳ್ಳುವ ಅಗತ್ಯವೇನಿದೆ? ಅವರ ನಡೆ-ನುಡಿಗಳು, ಮಾತನಾಡುವ ರೀತಿ ನೋಡಿದರೆ ಅವರು ಏನೆಂದು ಜನರಿಗೆ ಅರ್ಥವಾಗುತ್ತದೆ’ ಎಂದರು.

ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ತಮ್ಮನ್ನು ಗುರಿಯಾಗಿಸಲಾಗಿದೆ ಎಂಬ ಸಚಿವರ ಹೇಳಿಕೆ ಬಗ್ಗೆ ಉತ್ತರಿಸಿದ ಅವರು, ‘ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ, ಈ ಜಿಲ್ಲೆಯಲ್ಲಿ ಆಗಿರುವುದು ಅನಾಹುತ ಸತ್ಯ. ಆ ಬಗ್ಗೆ ಹೇಳಿದ್ದೇವೆ. ಅವರೇನೋ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಅವರು ತಡ ಮಾಡದೇ ಎಲ್ಲವನ್ನೂ ಬಿಚ್ಚಿಡಲಿ. ನಮಗೆ ಏನು ಬೇಕಾದರೂ ಮಾಡಲಿ, ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧವಿದ್ದೇವೆ’ ಎಂದರು.

See also  ಬೆಲೆ ಏರಿಕೆ ಮೂಲಕ ಜನರ ಪಿಕ್ ಪಾಕೇಟ್ ಗೆ ಬಿಜೆಪಿ ಯತ್ನ: ಡಿ.ಕೆ.ಶಿ ಆಕ್ರೋಶ

ಪಿಎಸ್ಐ ಅಕ್ರಮ ಸಂಬಂಧ ಬೇರೆ ಸಚಿವರು ಮಾಹಿತಿ ನೀಡಿದ್ದಾರಾ ಎಂಬ ಪ್ರಶ್ನೆಗೆ, ‘ಯಾರು ಮಾಹಿತಿ ನೀಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಬಹಳ ಹತ್ತಿರುವಿರುವವರೇ ನಮಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ. ಯಾರಾದರೂ ಜಗಳವಾಡಿದರೆ ನೆರೆ ಮನೆಯವರ ಜತೆ ಜಗಳವಾಡಬಹುದೇ ಹೊರತು, ದೂರದಲ್ಲಿರುವ ಮನೆಯವರ ಜತೆ ಸಾಧ್ಯವಿಲ್ಲ’ ಎಂದರು.

ಅಶ್ವತ್ಥ್ ನಾರಾಯಣ ಅವರ ವಿರುದ್ಧ ಬಿಜೆಪಿಯವರೇ ಷಡ್ಯಂತ್ರ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕುಮಾರಸ್ವಾಮಿ ಅವರು ಈ ಜಿಲ್ಲೆಯ ಶಾಸಕರಾಗಿದ್ದು, ಅವರಿಗೆ ಹೆಚ್ಚಿನ ಮಾಹಿತಿ ಇರಬಹುದು’ ಎಂದರು.

‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಕ್ರಮ ನಡೆದಿದೆ. ಇನ್ನು ಅವರದೇ ಶಾಸಕರು ಹೇಳಿರುವಂತೆ ಕೆಪಿಎಸ್ ಸಿ ಸದಸ್ಯರಾಗಲು ಹಣ ನೀಡಿದ್ದಾರೆ. ಈ ಬಗ್ಗೆ ಬೊಮ್ಮಾಯಿ ಅವರು ಇನ್ನೂ ಯಾಕೆ ಕೇಸು ದಾಖಲಿಸಿಲ್ಲ. ಎಸಿಬಿಗೆ ದೂರು ನೀಡಿ ವಿಚಾರಣೆ ನಡೆಸಬೇಕಾಗಿದೆ. ಕೆಪಿಎಸ್ ಸಿ ಸ್ವಾಯತ್ತ ಸಂಸ್ಥೆಯಾಗಿದ್ದು, ಇದರ ಸದಸ್ಯರ ನೇಮಕದಲ್ಲೇ ಭ್ರಷ್ಟಾಚಾರ ನಡೆದಿದೆ ಎಂದಾದರೆ ಇದು ಸಿದ್ದರಾಮಯ್ಯ ಅವರ ಕಾಲದಲ್ಲಾಗಿರಲಿ, ಬೇರೆಯವರ ಕಾಲದಲ್ಲಾಗಿರಲಿ ಆ ಪ್ರಕರಣದ ತನಿಖೆ ಮಾಡದೇ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯಪಾಲರು ಸುಮ್ಮನೆ ಕೂತಿರುವುದೇಕೆ? ಕೆಪಿಎಸ್ ಸಿ ಮುಖ್ಯಸ್ಥರು ಪ್ರಾಮಾಣಿಕರಾಗಿದ್ದರೆ ಅವರೂ ಈ ವಿಚಾರವಾಗಿ ದೂರು ದಾಖಲಿಸಬೇಕು’ ಎಂದರು.

ಈಶ್ವರಪ್ಪನವರ 40 % ಕಮಿಷನ್ ಪ್ರಕರಣದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಇದು ಹೊಸ ಪ್ರಕರಣವಲ್ಲ. ಬೇರೆ ಬೇರೆ ಇಲಾಖೆಗಳಲ್ಲಿ ನಡೆದಿರುವ ಅನೇಕ ಪ್ರಕರಣಗಳ ಮಾಹಿತಿ ನಮ್ಮ ಬಳಿ ಬರುತ್ತಿವೆ. ನಾವು ಒಂದೊಂದಾಗಿ ವಿಚಾರಗಳನ್ನು ತೆಗೆದುಕೊಂಡು ಹೋರಾಟ ಮಾಡುತ್ತೇವೆ. ಸಚಿವರು ಈ ಜಿಲ್ಲೆ ಉಸ್ತುವಾರಿ ವಹಿಸಿಕೊಂಡು 2-3 ವರ್ಷ ಆಗಿದೆ. ಈ ಜಿಲ್ಲೆ ಕ್ಲೀನ್ ಮಾಡುವುದಾಗಿ ಹೇಳಿದ್ದರು, ಮಾಡಲಿ. ಅವರು ಬಿಚ್ಚಿಡುತ್ತೇವೆ ಎಂದು ಹೇಳಿದ್ದು ಅವರು ಬಿಚ್ಚಿಡಲಿ. ಈ ಹಿಂದೆ ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ವೃಷಭಾವತಿ ಸ್ವಚ್ಛಗೊಳಿಸಲು ಹೊರಟಿದ್ದರು, ನಾವು ಕೂಡ ಕ್ಲೀನ್ ಮಾಡುವ ಪ್ರಯತ್ನ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ತಾಲೂಕಿನಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ದೂರಿದರು.

ಸಾರ್ವಜನಿಕ ಸಭೆಯಲ್ಲಿ ಗಂಡಸ್ಥನದ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಅವರು ಪ್ರಸ್ತಾಪ ಮಾಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ರಾಮನಗರ ಮಹಾ ಜನತೆಗೆ ಸವಾಲು ಹಾಕಿ ಇಲ್ಲಿ ಯಾರಾದರೂ ಗಂಡಸರು ಇದ್ಧೀರಾ ಎಂದು ಕೇಳಿದ್ದರು. ಇದಕ್ಕೆ ನಮ್ಮ ಅನಿತಕ್ಕ, ಮುಖ್ಯಮಂತ್ರಿಗಳು, ಬೇರೆ ಬಿಜೆಪಿ ಸಚಿವರುಗಳೇ ಸಾಕ್ಷಿ. ಈಗ ಅವರು ಹೇಳಬೇಕು, ಗಂಡಸರೋ ಅಲ್ಲವೋ ಎಂದು. ಅವರೇ ಬೇಕಾದರೆ ಟೆಸ್ಟ್ ಮಾಡಿಸಿಕೊಳ್ಳಲಿ’ ಎಂದು ಕಟಕಿಯಾಡಿದರು.

ದೇವಾಲಯ ನೂತನ ವಿಗ್ರಹಗಳ ಪ್ರತಿಷ್ಠಾಪನೆ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಹುಟ್ಟೂರು ದೊಡ್ಡ ಆಲಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಹಾಗೂ ಮಾರಮ್ಮದೇವಿ ದೇಗುಲ ನೂತನ ವಿಗ್ರಹಗಳ ಪ್ರತಿಷ್ಠಾಪನೆ ನಿಮಿತ್ತ ಹೋಮ ಹವನಗಳಲ್ಲಿ ಪಾಲ್ಗೊಂಡರು. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು;

See also  ರಾಜಕೀಯದಲ್ಲಿ ಹೋಂ ಮಿನಿಸ್ಟರ್ ಇನ್ನೂ ಎಳಸು; ಡಿ.ಕೆ ಶಿವಕುಮಾರ್

‘ನನಗೆ ಜನ್ಮ ಕೊಟ್ಟ ಊರಿದು. ಇದು ಊರಿನ ಐದನೇ ದೇವಸ್ಥಾನವಾಗಿದೆ. ಮರಳೇಗವಿಮಠದ ಶ್ರೀಗಳು ಹೇಳಿದಂತೆ, ಕನಕಪುರ ಕ್ಷೇತ್ರದಲ್ಲಿ ಸುಮಾರು 300ಕ್ಕೂ ಹೆಚ್ಚು ದೇವಾಲಯಗಳನ್ನು ಹೊಸದಾಗಿ ನಿರ್ಮಾಣ ಅಥವಾ ಜೀರ್ಣೋದ್ಧಾರ ಮಾಡಲಾಗಿದೆ. ನಮ್ಮ ಕ್ಷೇತ್ರದ ಜನತೆ ನೆಮ್ಮದಿ ಶಾಂತಿ, ಧರ್ಮ ಕಾಪಾಡಲಿ ಎಂದು ನಾವು ಸ್ಥಳೀಯರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಿದ್ದೇವೆ. ಕಬ್ಬಾಳಮ್ಮ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳು ಈ ಹಿಂದೆ ಹೇಗಿದ್ದವು ಎಂದು ನೀವೆಲ್ಲರೂ ನೋಡಿದ್ದೀರಿ. ಪಟ್ಲದಮ್ಮ ದೇವಾಲಯ ಕಟ್ಟಬೇಕಿದ್ದು, ಮುಂದೆ ಅದರ ಬಗ್ಗೆ ಗಮನ ಹರಿಸುತ್ತೇವೆ. ಇವೆಲ್ಲವನ್ನು ನಾನು ಉಳಿಸಿ ಬೆಳೆಸಿಕೊಂಡು ಹೋಗಬೇಕು.

ಈ ಕ್ಷೇತ್ರದ ಸುಮಾರು ಶೇ. 20ರಷ್ಟು ಜನ ಉದ್ಯೋಗ ಅರರಿಸಿಕೊಂಡು, ಬದುಕಿಗಾಗಿ ಬೆಂಗಳೂರಿಗೆ ಸ್ಥಳಾಂತರವಾಗುತ್ತಿದ್ದು, ಎಲ್ಲರ ಸಂಪರ್ಕ ಇಟ್ಟುಕೊಂಡು ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಈ ಕಾರ್ಯವನ್ನು ನಾನು ಅಥವಾ ಸುರೇಶ್ ಮಾತ್ರ ಮಾಡಿದ್ದೇವೆ ಎಂದೇನೂ ಅಲ್ಲ. ಸ್ಥಳೀಯರ ಸಹಕಾರ ಮುಖ್ಯವಾಗಿದೆ. ನಮ್ಮ ಧರ್ಮ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ.

ನಮ್ಮ ಎಲ್ಲ ಸಾಧನೆಗೆ ನಮ್ಮ ಕ್ಷೇತ್ರದ ಜನತೆಯೆ ಸಹಕಾರವೇ ಕಾರಣ. ಅದನ್ನು ಮರೆಯಲು ಸಾಧ್ಯವಿಲ್ಲ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.’

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು