ಬೆಂಗಳೂರು: ಅಡ್ಡಾದಿಡ್ಡಿಯಾಗಿ ಟೆಂಪೊ ಟ್ರಾವೆಲರ್ ಚಲಾಯಿಸಿ ಅಪಘಾತ ಉಂಟುಮಾಡಿದ್ದ ಚಾಲಕನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
‘ವಿಜಯನಗರ ಠಾಣೆ ವ್ಯಾಪ್ತಿಯ ಪಟೇಗಾರಪಾಳ್ಯದಲ್ಲಿ ಸೋಮವಾರ ಬೆಳಿಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಅಪಘಾತಕ್ಕೆ ಕಾರಣನಾದ ಟೆಂಪೊ ಟ್ರಾವೆಲರ್ ಚಾಲಕ ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪಾನಮತ್ತನಾಗಿದ್ದ ನಾಗರಾಜ್, ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದ. ರಸ್ತೆಯಲ್ಲಿ ಹೊರಟಿದ್ದ ಮೂರು ದ್ವಿಚಕ್ರ ವಾಹನಕ್ಕೆ ಟೆಂಪೊ ಟ್ರಾವೆಲರ್ ಗುದ್ದಿಸಿದ್ದ. ಅಪಘಾತದ ನಂತರವೂ ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದ.’
‘ಟೆಂಪೊ ಟ್ರಾವೆಲರ್ ಬೆನ್ನಟ್ಟಿ ತಡೆದಿದ್ದ ಸಾರ್ವಜನಿಕರು, ಚಾಲಕ ನಾಗರಾಜ್‌ನನ್ನು ಹಿಡಿದು ಥಳಿಸಿದ್ದರು. ನಂತರ, ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ. ‘ನಾಗರಾಜ್‌ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಮದ್ಯದ ಅಂಶ ಕಂಡುಬಂದಿದೆ’ ಎಂದೂ ತಿಳಿಸಿವೆ.