ಬೆಂಗಳೂರು, ಆ.16: ಸರಕಾರಿ ನೌಕರಿ ಪಡೆಯಬೇಕಾದರೆ ಯುವತಿಯರು ಮಂಚ ಹತ್ತಬೇಕು ಎನ್ನುವ ಹೇಳಿಕೆ ಕೊಡುವ ಮೂಲಕ ಸರಕಾರಿ ಮಹಿಳೆಯರ ವಿರುದ್ದ ತಮ್ಮ ಕೆಟ್ಟ ನಾಲಿಗೆಯನ್ನು ಹರಿಬಿಟ್ಟಿರುವ ಮಾಜಿ ಸಚಿವರ ಪ್ರಿಯಾಂಕ ಖರ್ಗೆ ವಿರುದ್ದ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ವತಿಯಿಂದ ದೂರು ನೀಡಲಾಗಿದೆ.
ದೂರನ್ನು ದಾಖಲಿಸಿದ ನಂತರ ಆಪ್ ಮಹಿಳಾ ಘಟಕದ ಅಧ್ಯಕ್ಷರಾದ ಜಿ.ಎನ್ ಕುಶಲ ಸ್ವಾಮಿ ಅವರು ಮಾತನಾಡಿ, ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು, ಆಗಸ್ಟ್ 12, 2022 ರಂದು ಕಲಬುರಗಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಿದ್ದ ಸಂಧರ್ಭದಲ್ಲಿ, “ಇದು ಲಂಚ-ಮಂಚದ ಸರಕಾರ, ಯುವಕರಿಗೆ ನೌಕರಿ ಬೇಕಂದ್ರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕೆಂದರೆ ಮಂಚ ಹತ್ತಬೇಕು” ಎನ್ನುವ ಕೀಳು ಹೇಳಿಕೆಯನ್ನು ನೀಡಿದ್ದಾರೆ.
ರಾಜಕೀಯವಾಗಿ ತಮ್ಮ ಬೇಳೆ ಕಾಳನ್ನು ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷಗಳು ಹಾಗೂ ಸರಕಾರಗಳ ಮೇಲೆ ಕೀಳು ಹೇಳಿಕೆ ನೀಡುವುದು ಹೊಸತೇನಲ್ಲ. ಆದರೆ, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿರುವ ರಾಜಕೀಯ ಕುಟುಂಬದ ಕುಡಿಯಾಗಿರುವ ಅವರು ತಮ್ಮ ನಾಲಿಗೆಯ ಮೂಲಕ ಕೆಟ್ಟ ಹೇಳಿಕೆಯನ್ನು ನೀಡಿದ್ದಾರೆ.
ಸರಕಾರಿ ಕೆಲಸ ಪಡೆಯುವ ಎಲ್ಲಾ ಮಹಿಳಾ ಅಭ್ಯರ್ಥಿಗಳ ಮೇಲೆ ಕಪ್ಪು ಚುಕ್ಕೆಯನ್ನು ಬರುವಂತಹ ಈ ಹೇಳಿಕೆ ಖಂಡನೀಯವಾಗಿದೆ. ಈ ಹೇಳಿಕೆಯ ತೀವ್ರತೆಯನ್ನು ಗಮನಿಸಿ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸಬೇಕು. ಹಾಗೂ ಮಹಿಳೆಯರ ಬಗ್ಗೆ ಅಸಂಬದ್ದ ಹೇಳಿಕೆ ನೀಡಿರುವ ಮಾಜಿ ಸಚಿವರ ವಿರುದ್ದ ಕ್ರಮ ಕೈಗೊಳ್ಳುವಂತೆ ನಾವು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಸಾರ್ವಜನಿಕವಾಗಿ ಈ ಹೇಳಿಕೆಯ ಬಗ್ಗೆ ಕ್ಷಮಾಪಣೆಯನ್ನು ಕೇಳದೇ ಇದ್ದಲ್ಲಿ ಪ್ರಿಯಾಂಕ ಖರ್ಗೆ ಅವರ ನಿವಾಸದ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಯಿತು.