ಬೆಂಗಳೂರು: ರಾಜ್ಯದಲ್ಲಿ ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಿ ಮತ್ತೂ ನೂರು ಹೊಸ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ‘ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದ ಅವರು ಒಬ್ಬ ವ್ಯಕ್ತಿಯ ಸಾಮರ್ಥ್ಯದ ಪರೀಕ್ಷೆ ಅವರಿಗೆ ಸವಾಲುಗಳು ಎದುರಾಗ ಗೊತ್ತಾಗುತ್ತದೆ. ಹೊಸ ವೈರಾಣುಗಳು ಜನರಿಗೆ ದೊಡ್ಡ ಪ್ರಮಾಣದಲ್ಲಿ ಹರಡಿದಾಗ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿರುತ್ತದೆ. ಕೋವಿಡ್-19 ವೈದ್ಯಕೀಯ ಜಗತ್ತಿಗೇ ದೊಡ್ಡ ಸವಾಲಾಗಿ ಪರಿಣಮಿಸಿ, ಇದರಿಂದ ಹೊಸ ಪ್ರಯೋಗಗಳು, ಆವಿಷ್ಕಾರಗಳಿಗೆ ನಾಂದಿ ಹಾಕಿತು. ಇದನ್ನು ಮನುಕುಲವು ಎದುರಿಸಿದಾಗ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯ ಕೇಂದ್ರ ಸರ್ಕಾರಗಳು ತಂದಿರುವ ಆಯುಷ್ಮನ್ ಭಾರತ್ ವಿಮೆ ಯಶಸ್ವಿ ಯೋಜನೆಯಾಗಿದೆ. ಸ್ವಚ್ಛ ಭಾರತದಿಂದ ಸ್ವಸ್ಥ್ಯ ಭಾರತ ನಿರ್ಮಾಣವಾಗುತ್ತದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯವು ಇಡೀ ಏಷ್ಯಾದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗುತ್ತದೆ ಎಂದರು.
ರಾಜ್ಯದ 9 ಜಿಲ್ಲೆಯಲ್ಲಿ ಬಿಟ್ಟು ಉಳಿದೆಲ್ಲೆಡೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಶೀಘ್ರವೇ ಪ್ರತಿ ಈ ಜಿಲ್ಲೆಗಳಲ್ಲಿಯೂ ವೈದ್ಯಕೀಯ ಕಾಲೇಜು ತೆರೆಯಲಾಗುವುದು. ಎಲ್ಲ ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗುವುದು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆಯೋಗ್ಯ ಬಗೆಗೆ ವೈದ್ಯರು ಗಮನಹರಿಸಬೇಕು. ಮಾನಸಿಕ ಖಿನ್ನತೆ ಇತ್ತೀಚೆಗೆ ಸಾಮಾನ್ಯ ಕಾಯಿಲೆಯಾಗಿದೆ. ಮಾನಸಿಕ ಖಿನ್ನತೆಯಿಂದ ಜನರು ಹೊರಬರಲು ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಯದೇವ, ಕಿದ್ವಾಯಿ, ನಿಮಾನ್ಸ್ ಆಸ್ಪತೆಗೆ ನಮ್ಮ ರಾಜ್ಯದಿಂದ ಮಾತ್ರವಲ್ಲದೇ ದಕ್ಷಿಣ ಭಾರತದಿಂದಲೂ ಜನ ಬರುತ್ತಾರೆ. ಹೃದಯ ಸಂಬಂಧ ಕಾಯಿಲೆಗಳು ಹೆಚ್ಚಾಗುತ್ತಿದೆ. ಅವರಿಗೆ ಕಣ್ಣು, ಕಿವಿ, ಹೃದಯ, ಆರೋಗ್ಯ ತಪಾಸಣೆಗೆ ಶಿಬಿರಗಳನ್ನು ಆಯೋಜಿಸಲಾಗುವುದೆಂದರು.
ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಆರ್. ಸುಧಾಕರ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ವೈದ್ಯರು, ಸಿಬ್ಬಂದಿ ವರ್ಗದವರು ಮಹತ್ತದ ಸೇವೆಯನ್ನು ಸಲ್ಲಿಸಿದ್ದಾರೆ. ಕೋವಿಡ್ ಲಸಿಕೆ ಎರಡು ಡೋಸ್ ನೀಡಿಕೆಯಲ್ಲಿ ರಾಜ್ಯ ಶೇ 100ರಷ್ಟು ಸಾಧನೆ ಮಾಡಿದೆ. ಬೂಸ್ಟರ್ ಡೋಸ್‍ನ್ನು ಸಹ ವೈದ್ಯರು ಜನರಿಗೆ ನೀಡಬೇಕೆಂದರು. ಕರ್ನಾಟಕ ವಿಷನ್ ಡಾಕ್ಯೂಮೆಂಟ್ 2025 ಅನ್ನು ಸಿದ್ದಪಡಿಸಲಾಗಿದ್ದು ಮುಂಬರುವ ದಿನಗಳಲ್ಲಿ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಲಿದೆ. ಬಡವರ ಚಿಕಿತ್ಸೆಗಾಗಿ ‘ನಮ್ಮ ಕ್ಲಿನಿಕ್’ ರಾಜ್ಯದಲ್ಲಿ 500 ಹಾಗೂ ಬೆಂಗಳೂರಿನಲ್ಲಿ 243 ಹೊಸ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗುವುದು. ಕೋವಿಡ್ ಸಂದಭದಲ್ಲಿ 25ಲಕ್ಷ ಸೋಂಕಿತರಿಗೆ ಟೆಲಿ ಕೌನ್ಸಿಲಿಂಗ್ ನೀಡಲಾಯಿತು ಎಂದರು.
ಕಾರ್ಯಕ್ರಮದಲ್ಲಿ ವಿಷನ್ ಡಾಕ್ಯುಮೆಂಟ್ 2020-25 ಅನ್ನು ಮುಖ್ಯಮಂತ್ರಿಗಳು ಹಾಗೂ ಇತರ ಗಣ್ಯರು ಬಿಡುಗಡೆಗೊಳಿಸಿದರು. ಅಲ್ಲದೆ ಕೋವಿಡ್ ಹಾಗೂ ಇತರ ಸಂದರ್ಭಗಳಲ್ಲಿ ಸಾಧನೆ ಮಾಡಿದ ಎಲ್ಲ ಜಿಲ್ಲೆಯ ವೈದ್ಯರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್, ಸಂಸದ ಉಮೇಶ್ ಜಾದವ್ ಶಿವಾಜಿನರಗರದ ಶಾಸಕ ರಿಜ್ವಾನ್ ಅರ್ಷದ್, ಅ. ದೇವೇಗೌಡ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ನ್ಯಾಷನಲ್ ಆರೋಗ್ಯ ಮಿಷನ್ ನಿರ್ದೇಶಕಿ ಅರುಂಧತಿ ಚಂದ್ರಶೇಖರ್, ಇತರ ಹಿರಿಯ ಅಧಿಕಾರಿಗಳು, ವೈದ್ಯರು, ಉಪಸ್ಥಿತರಿದ್ದರು. ಭಾರತ ರತ್ನ ಡಾ.ಬಿ.ಸಿ.ರಾಯ್ ಅವರ ಸ್ಮರಣಾರ್ಥ ಆಚರಿಸಲಾಗುತ್ತಿರುವ ವೈದ್ಯರ ದಿನಾಚರಣೆ ಸಂದರ್ಭದಲ್ಲಿ ಅವರ ಕುರಿತ ಕಿರುಚಿತ್ತ ಪ್ರದರ್ಶಿಸಲಾಯಿತು.