News Kannada
Saturday, October 08 2022

ಬೆಂಗಳೂರು ನಗರ

ಬೆಂಗಳೂರು: ಭಾರತ್ ಜೋಡೋ ಯಾತ್ರೆ ಪಕ್ಷಾತೀತ ಕಾರ್ಯಕ್ರಮ- ಡಿ.ಕೆ. ಶಿವಕುಮಾರ್ - 1 min read

Bengaluru: Bharat Jodo Yatra is a non-partisan programme, says DK Shivakumar Shivakumar
Photo Credit :

ಬೆಂಗಳೂರು: ಭಾರತ್ ಜೋಡೋ ಯಾತ್ರೆ ಹೊಸ ಟ್ರೆಂಡ್ ಸೆಟ್ ಮಾಡುತ್ತದೆ ಜೊತೆಗೆ ಇಡೀ ದೇಶಕ್ಕೆ ಈ ಯಾತ್ರೆ ಮಾದರಿಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಉದಯಪುರ ಚಿಂತನ ಮಂಥನ ಶಿಬಿರದಲ್ಲಿ ವಿವಿಧ ಘಟಕಗಳ ಪ್ರಮುಖರು, ಸಂಸದರು ಸೇರಿದಂತೆ ಆರುನೂರು ನಾಯಕರು ಪಾಲ್ಗೊಂಡು ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ತೀರ್ಮಾನಿಸಲಾಗಿದೆ. ಅದರಲ್ಲಿ ಪ್ರಮುಖ‌ವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ‘ಭಾರತದ ಐಕ್ಯತಾ ಯಾತ್ರೆ’ ಹಮ್ಮಿಕೊಳ್ಳುವ ನಿರ್ಧಾರ ಮಾಡಲಾಗಿತ್ತು. ಇದರ ಜತೆಗೆ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡುವುದು ಹಾಗೂ ಆ.15ರಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡಲು ಸೂಚಿಸಿದ್ದರು. ಇದರಂತೆ ನಮ್ಮ ಎಲ್ಲ ಜಿಲ್ಲಾ ನಾಯಕರು ಕೆಲವು ಕ್ಷೇತ್ರದಲ್ಲಿ 225 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಆ ಮೂಲಕ ನಮ್ಮ ನಾಯಕರು ಕಾರ್ಯಕರ್ತರು ಜನರನ್ನು ತಲುಪುತ್ತಿದ್ದಾರೆ. ಇನ್ನು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದು, ಯುವಕರೇ ಹೆಚ್ಚಾಗಿದ್ದರು ಎಂಬುದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ.

ಭಾರತ ಒಗ್ಗೂಡಿಸಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದ ಐಕ್ಯತೆ ಯಾತ್ರೆ ನಡೆಯಲಿದೆ. ಈ ಪಾದಯಾತ್ರೆ ಜವಾಬ್ದಾರಿಯನ್ನು ಕಾಂಗ್ರೆಸ್ ವಹಿಸಿದ್ದರೂ ಇದು ಪಕ್ಷಾತೀತ ಯಾತ್ರೆಯಾಗಿರುತ್ತದೆ. ಈ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ 21 ದಿನ, ಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಸಾಗಲಿದೆ. ಒಂದೊಂದು ದಿನ ಯಾರು ಪಾಲ್ಗೊಳ್ಳಬೇಕು, 21 ದಿನವೂ ಯಾರು ಇರಬೇಕೆಂದು ನಿಶ್ಚಯಿಸಲಾಗಿದೆ. ನೋಂದಣಿಗೂ ಅವಕಾಶ ಇರಲಿದೆ. ಬೆಳಗ್ಗೆ ಹನ್ನೊಂದರವರೆಗೆ ಜನರೊಂದಿಗೆ ಚರ್ಚೆ ನಡೆಸಿ, ನಂತರ ಪಾದಯಾತ್ರೆ ಸಂಜೆ ವರೆಗೂ ಸಾಗಲಿದೆ. ಕನ್ನಡದ ಲೇಪದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ.

ಈ ದೇಶದಲ್ಲಿ ಸಾಮಾಜಿಕ ಸಾಮರಸ್ಯ ಹದಗೆಡುತ್ತಿದ್ದು, ಕುವೆಂಪು ಅವರು ಹೇಳಿರುವಂತೆ ನಮ್ಮ ನಾಡು ಶಾಂತಿಯ ತೋಟ ಆಗಬೇಕು, ಪ್ರತಿ ಕುಟುಂಬವೂ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು, ಅದರಲ್ಲೂ ಮಹಿಳೆಯರಿಗೆ ಆರ್ಥಿಕ, ಮಾನಸಿಕ ಶಕ್ತಿ ತುಂಬಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಿದ್ದು ಯುವಕರಿಗೆ ಉದ್ಯೋಗ ಸಿಗಬೇಕು, ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಆಗಬೇಕು, ರೈತರು ಹಾಗೂ ಕಾರ್ಮಿಕರ ಬದುಕು ಹಸನಾಗಬೇಕು. ಈ ಐದು ಉದ್ದೇಶದೊಂದಿದೆ ಎಲ್ಲ ವರ್ಗದವರನ್ನು ರಕ್ಷಣೆ ಮಾಡಲು ಭಾರತ ಜೋಡೋ ಯಾತ್ರೆ ನಡೆಯಲಿದೆ.

ನಮ್ಮ ರಾಜ್ಯದಲ್ಲಿನ ಪಾದಯಾತ್ರೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂಬ ವಿಶ್ವಾಸವಿದೆ. ಈ ಪಾದಯಾತ್ರೆಯಲ್ಲಿ ಶಿಕ್ಷಕರು, ನಿವೃತ್ತ ಅಧಿಕಾರಿಗಳು, ಸಂಘ ಸಂಸ್ಥೆಗಳು, ರೈತರು, ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ನಿತ್ಯ 25 ಕಿ.ಮೀ ದೂರ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆಗೆ ಎಲ್ಲ ಜಿಲ್ಲೆಗಳ ಜನರು ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ 3,500 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ.

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇದೆ, ನಾಳೆ ಪದಾಧಿಕಾರಿಗಳ ಸಭೆ ನಡೆಯಲಿದೆ. ಪಾದಯಾತ್ರೆಯಲ್ಲಿ ಎಲ್ಲ ನಾಯಕರು ಜವಾಬ್ದಾರಿಯನ್ನು ಹಂಚಿಕೊಳ್ಳುತ್ತೇವೆ. ರಾಜ್ಯದ ಪ್ರಮುಖ ನಾಯಕರೆಲ್ಲರೂ ಸೆ. 7 ರಂದು ಕನ್ಯಾಕುಮಾರಿಯಲ್ಲಿ ಈ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ.

ಬಿ.ಕೆ ಹರಿಪ್ರಸಾದ್ ಅವರಿಗೆ ರಾಜ್ಯದಲ್ಲಿನ ಪಾದಯಾತ್ರೆ ಉಸ್ತುವಾರಿ ನೀಡಲಾಗಿದ್ದು, ರಾಷ್ಟ್ರ ಮಟ್ಟದ ಸಮಿತಿಯಲ್ಲಿ ಕೆ.ಜೆ. ಜಾರ್ಜ್, ಸಲೀಂ ಅಹ್ಮದ್ ಅವರಿಗೆ ಸ್ಥಾನ ನೀಡಲಾಗಿದ್ದು, ವಿವಿಧ ಜವಾಬ್ದಾರಿ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆ ಸಭೆ ಮಾಡಿ ಯಾರೆಲ್ಲಾ 21 ದಿನ ನಡೆಯಬೇಕು ಎಂದು ಅಭಿಪ್ರಾಯ ಸಂಗ್ರಹಿಸಿ, ನಂತರ ಅವರನ್ನು ಆಯ್ಕೆ ಮಾಡಲಾಗುವುದು. ಎಲ್ಲರಿಗೂ ಅಧಿಕೃತ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

See also  ಕೊಲಂಬೊ: ಶ್ರೀಲಂಕಾದಲ್ಲಿ ಕೋವಿಡ್, ಡೆಂಗ್ಯೂ ಪ್ರಕರಣಗಳು ಏರಿಕೆ

ಬಳ್ಳಾರಿಯಲ್ಲಿ ಒಂದು ದಿನ ಸಾರ್ವಜನಿಕ ಸಮಾವೇಷ ಮಾಡಲಾಗುವುದು. ಮೈಸೂರಿನಲ್ಲಿ ತಾಂತ್ರಿಕ ಸಮಸ್ಯೆ ಇದೆ. ಅಕ್ಟೋಬರ್ 4-5 ರಂದು ದಸರಾ ಹಬ್ಬ ನಡೆಯಲಿದ್ದು, ಈ ದಿನ ಯಾವ ರೀತಿ ಮಾಡಬೇಕು ಎಂದು ದೆಹಲಿ ನಾಯಕರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದಯಪುರದಲ್ಲಿ ನಡೆದ ಚಿಂತನ ಮಂಥನ ಶಿಬಿರದಲ್ಲಿ ದೇಶವನ್ನು ಕೂಡಿಸಲು ಭಾರತ ಐಕ್ಯತೆ ಯಾತ್ರೆ ನಡೆಸಬೇಕು ಎಂದು ತೀರ್ಮಾನಿಸಲಾಯಿತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಲು ಎಲ್ಲಾ ನಾಯಕರು ತೀರ್ಮಾನಿಸಿದರು.

ದೇಶದಲ್ಲಿ ಸಾಮಾಜಿಕ ಸಮರಸ್ಯ ಹಾಳಾಗುತ್ತಿದ್ದು ದೇಶದ ಐಕ್ಯತೆಗೆ ಧಕ್ಕೆ ಬರುತ್ತಿದೆ. ಸಮಾಜದಲ್ಲಿ ಮತ್ತೆ ಸಮರ್ಥ್ಯ ಸ್ಥಾಪಿಸಲು ದೇಶದ ಐಕ್ಯತೆಯನ್ನು ರಕ್ಷಿಸಲು, ಪ್ರಜಾಪ್ರಭುತ್ವ ಕಾಪಾಡಲು, ಸಂವಿಧಾನ ರಚಿಸಲು, ಹೆಚ್ಚಾಗುತ್ತಿರುವ ಧರ್ಮರಾಜ ಕರ್ಣ ಹಾಗೂ ಅದರ ಮೂಲಕ ಸಮಾಜವನ್ನು ಒಡೆಯುವುದರ ವಿರುದ್ಧ ಈ ಪಾದಯಾತ್ರೆಯನ್ನು ಮಾಡಲಾಗುತ್ತಿದೆ.

ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದು ಅಷ್ಟೇ ಅಲ್ಲದೆ, ದೇಶದಲ್ಲಿರುವ ಎಲ್ಲರಿಗೂ ಸಮಾನತೆ ನೀಡಿ, ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು, ನಮ್ಮ ಬಹುತ್ವ ಸಮಾಜ ಕಾಪಾಡಿ, ಎಲ್ಲಾ ಧರ್ಮಗಳ ನಡುವೆ ಸಮನ್ವಯತೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಸಹನೆ, ಸಹಿಷ್ಣುತೆ, ಸಹಬಾಳ್ವೆಯನ್ನು ನಾವು ಸಂವಿಧಾನದ ಮೂಲಕ ಒಪ್ಪಿಕೊಂಡಿದ್ದೇವೆ. ಇದು ಪಾಲನೆ ಆಗಬೇಕು. ಆ ಮೂಲಕ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕು. ಸರ್ವರ ಅಭಿವೃದ್ಧಿಯಾಗಬೇಕು. ಸಮ ಸಮಾಜದ ನಿರ್ಮಾಣ ಮಾಡಬೇಕು ಎಂಬುದು ಕಾಂಗ್ರೆಸ್ ಉದ್ದೇಶವಾಗಿದೆ.

ಇದೇ ಕಾರಣಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವು, ದೇಶದಲ್ಲಿ ವಿಭಜನೆಯಾಗಿದ್ದ 600 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಟ್ಟುಗೂಡಿಸಿ ಭಾರತ ಸಾರ್ವಭೌಮ ಹಾಗೂ ಒಕ್ಕೂಟ ರಾಷ್ಟ್ರವನ್ನಾಗಿ ಮಾಡಲಾಯಿತು.

ಎಲ್ಲರಿಗೂ ಸಮಾನತೆ ನೀಡುವ ಉದ್ದೇಶದಿಂದ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನ ಸಮಾನ ರಕ್ಷಣೆಯನ್ನು ಮಾಡಲಾಯಿತು. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಮೂಲ ಉದ್ದೇಶವಾಗಿದೆ.

ದೇಶದಲ್ಲಿನ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಲಾಗಿತ್ತು. ಆದರೆ ಈಗ ಕೋಮುವಾದಿಗಳಿಗೆ ಅಧಿಕಾರ ಸಿಕ್ಕ ನಂತರ ಸಮಾಜ ಒಡಿಯುವಂತಹ, ಜಾತಿ ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ದೇಶದ ಜನರನ್ನು ಒಗ್ಗೂಡಿಸಲು, ನಾವೆಲ್ಲರೂ ಭಾರತೀಯರು ಮನುಷ್ಯರು ಎಂಬ ಭಾವನೆಗಳ ಮೂಲಕ ಜನರನ್ನು ಒಗ್ಗೂಡಿಸಲು ಈ ಪಾದಯಾತ್ರೆ ಮಾಡಲಾಗುತ್ತಿದೆ.

ಹೀಗಾಗಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ವಾತಂತ್ರ ಸಮಾನತೆ ಹಾಗೂ ಭ್ರಾತೃತ್ವ ಅಂಶಗಳನ್ನು ಪ್ರಸ್ತಾಪಿಸುತ್ತಾರೆ. ಈ ಮೂರು ವಂಶಗಳನ್ನು ನಾವು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಆಗ ಮಾತ್ರ ದೇಶ ಐಕ್ಯತೆಯಿಂದ ಒಗ್ಗಟ್ಟಾಗಿರಲು ಸಾಧ್ಯ. ಹೀಗಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ.

See also  ಹಣ ಪಡೆದು ಫ್ಲ್ಯಾಟ್ ಕೊಡುವುದಾಗಿ ವಂಚಿಸಿದ ಉದ್ಯಮಿ ಸೆರೆ

ದೇಶದ ಎಲ್ಲ ರಾಜ್ಯಗಳಲ್ಲೂ ಈ ಪಾದಯಾತ್ರೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3500 ಕಿ.ಮೀ ನಷ್ಟು ದೂರ ಪಾದಯಾತ್ರೆ ಮಾಡಲಾಗುತ್ತಿದೆ.

ಈ ಪಾದಯಾತ್ರೆ ಅನೇಕ ರಾಜ್ಯಗಳಲ್ಲಿ ಹಾದು ಹೋಗಲಿದ್ದು, ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ ದೂರ ಪಾದಯಾತ್ರೆ ಸಾಗಲಿದೆ. ಈ ಪಾದಯಾತ್ರೆಯಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ. ರಾಹುಲ್ ಗಾಂಧಿಯವರ ಜೊತೆ 125 ನಾಯಕರು ಭಾರತ ಯಾತ್ರಿಗಳಾಗಿ ಎಲ್ಲ ರಾಜ್ಯಗಳಲ್ಲೂ ಹೆಜ್ಜೆ ಹಾಕಲಿದ್ದಾರೆ. ರಾಜ್ಯ ಹಾಗೂ ಬೇರೆ ಬೇರೆ ರಾಜ್ಯದವರು ಸೇರಿದಂತೆ ಕನಿಷ್ಠ 300 ಮಂದಿ ಸದಾ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಅವರ ಜೊತೆ ಸ್ಥಳೀಯ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರು ಅವರ ಜೊತೆ ಸೇರಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಪಾದಯಾತ್ರೆ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಲಿತ್ತು 30 ರಂದು ಗುಂಡ್ಲುಪೇಟೆಗೆ ಪ್ರವೇಶಿಸುತ್ತಾರೆ. ನಂತರ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಲ್ಲಿ ಪಾದಯಾತ್ರೆ ಸಾಗಲಿದೆ. ರಾಹುಲ್ ಗಾಂಧಿಯವರು 150 ದಿನಗಳಲ್ಲಿ 3500 ಕಿಲೋಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಆ ಮೂಲಕ ಅವರು ಜನರಲ್ಲಿ ಹೊಸ ಭರವಸೆ, ದೇಶ ಅಭಿಮಾನ, ಭಾವನೆ ಮೂಡಿಸಲಿದ್ದಾರೆ. ದೇಶದ 130 ಕೋಟಿ ಜನರು ಅಣ್ಣ-ತಮ್ಮಂದಿರಂತೆ ಬದುಕಬೇಕು.

ಇದರ ಜೊತೆಗೆ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಸಮಸ್ಯೆ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲಾಗುವುದು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಸೆ.7ರಂದು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯ ವಿವೇಕಾನಂದ ಪ್ರತಿಮೆ, ತಿರುವಳ್ಳುವರ್ ಪ್ರತಿಮೆ, ಮಹಾತ್ಮಾ ಗಾಂಧಿ ಮಂಟಪ, ಕಾಮರಾಜ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿ ಮಧ್ಯಾಹ್ನ ಪಾದಯಾತ್ರೆ ಆರಂಭವಾಗಲಿದೆ. 19 ದಿನಗಳ ಕಾಲ ಕೇರಳ, 4 ದಿನಗಳ ಕಾಲ ತಮಿಳುನಾಡಿನಲ್ಲಿ ಪಾದಯಾತ್ರೆ ಮಾಡಲಾಗುವುದು. ಸೆ.29 ಅಥವಾ 30ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಲಿದ್ದಾರೆ.

ರಾಹುಲ್ ಗಾಂಧಿ ಅವರ ಜತೆ 125 ಮಂದಿ ಭಾರತ ಯಾತ್ರಿಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 3500 ಕಿ.ಮೀ ಹೆಜ್ಜೆ ಹಾಕಲಿದ್ದಾರೆ.

ಕರ್ನಾಟಕ ರಾಜ್ಯದ 125 ಕಾಂಗ್ರೆಸ್ ನಾಯಕರು ರಾಜ್ಯ ಪಾದಯಾತ್ರಿಗಳಾಗಿ ರಾಜ್ಯದ 511 ಕಿ.ಮೀ ನಡೆಯಲಿದ್ದಾರೆ. ಇನ್ನು ನೆರೆ ರಾಜ್ಯದ 125 ನಾಯಕರಿಗೆ ಅತಿಥಿ ಯಾತ್ರಿಗಳಾಗಿ ಅವಕಾಶ ನೀಡಲಾಗುವುದು.

ನಿತ್ಯ ಬೆಳಗ್ಗೆ 7 ಗಂಟೆಗೆ ಸ್ಥಳೀಯವಾಗಿ ಪಾದಯಾತ್ರೆ ಆರಂಭವಾಗಲಿದೆ. 11 ಗಂಟೆವರೆಗೂ ಹಳ್ಳಿ ಹಾಗೂ ಗ್ರಾಮಸ್ಥರ ಜತೆ ಪಾದಯಾತ್ರೆ. ನಂತರ 11ರಿಂದ ಮಧ್ಯಾಹ 2 ಗಂಟೆವರೆಗೂ ಸ್ಥಳೀಯ ಸಾಹಿತಿಗಳು, ಕಲಾವಿದರು, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರ ಜತೆ ಸಂಭಾಷಣೆ ನಡೆಸುತ್ತಾರೆ. ನಂತರ ಸುಮಾರು 20 ಸಾವಿರ ಜನ ಸ್ಥಳೀಯರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಲಿದ್ದಾರೆ.

ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರುವರೆಗೂ ಪಾದಯಾತ್ರೆ ಸಾಗಿ ತೆಲಂಗಾಣಕ್ಕೆ ಪ್ರವೇಶಿಸುವುದು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು